ಬೆಂಗಳೂರು : ನಗರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ನೈಜ ಅನುಭವ ನೀಡುವ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯಾದ ‘ಗ್ರಾಮಾನುಭವ’ ಕಾರ್ಯಕ್ರಮಕ್ಕೆ ನವೆಂಬರ್ 01ರ ಕನ್ನಡ ರಾಜ್ಯೋತ್ಸವದಂದು ಅಧಿಕೃತವಾಗಿ ಚಾಲನೆ ದೊರೆಯಲಿದೆ.
ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಈ ಕುರಿತು ಮಾಹಿತಿ ನೀಡಿದ್ದು, ನವೆಂಬರ್ 1 ರಂದು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಏಕಕಾಲಕ್ಕೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ಕಾರ್ಯಕ್ರಮದ ಮುಖ್ಯ ಉದ್ದೇಶ ಹಾಗೂ ವೈಶಿಷ್ಟಗಳು
ಗುರಿ ಹೊಂದಿದ ವಿದ್ಯಾರ್ಥಿಗಳು: ನಗರ ಪ್ರದೇಶದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8, 9 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ತಲುಪಿಸಲಾಗುತ್ತಿದೆ.
ಪ್ರಾಯೋಗಿಕ ಕಲಿಕೆ: ತರಗತಿಯ ಕಲಿಕೆಯನ್ನು ಗ್ರಾಮೀಣ ಸಮುದಾಯದ ನೈಜ ಜೀವನದೊಂದಿಗೆ ಬೆಸೆಯುವುದು ಇದರ ಪ್ರಮುಖ ಉದ್ದೇಶವಾಗಿದೆ.
ನೇರ ಅನುಭವ: ಶೈಕ್ಷಣಿಕ ಭೇಟಿಗಳ ಮೂಲಕ ವಿದ್ಯಾರ್ಥಿಗಳು ರೈತರು, ಕುಶಲಕರ್ಮಿಗಳು, ಪಶುಸಂಗೋಪನೆದಾರರು ಹಾಗೂ ಗ್ರಾಮೀಣ ಉದ್ಯಮಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ ಕಲಿಯಲಿದ್ದಾರೆ.
ಮೌಲ್ಯವರ್ಧನೆ: ಈ ಕಾರ್ಯಕ್ರಮವು ಮಕ್ಕಳಲ್ಲಿ ಶ್ರಮದ ಘನತೆ, ರೈತರ ಬಗ್ಗೆ ಗೌರವ, ಕೃಷಿ, ಸಾಂಪ್ರದಾಯಿಕ ಜ್ಞಾನ, ಸ್ಥಳೀಯ ಸಂಸ್ಕೃತಿ ಮತ್ತು ಸುಸ್ಥಿರ ಜೀವನಶೈಲಿಯ ಅರಿವನ್ನು ಮೂಡಿಸಲಿದೆ.
ಕರ್ನಾಟಕದ ಅಭಿವೃದ್ಧಿಯಲ್ಲಿ ಹಳ್ಳಿಗಳ ಪಾತ್ರವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಹಾಗೂ ಕಲಿಕೆಯನ್ನು ಹೆಚ್ಚು ಅನುಭವಾಧಾರಿತ ಮತ್ತು ಅರ್ಥಪೂರ್ಣವಾಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












