ಚಿತ್ರದುರ್ಗ. ಅ.31: ಚಿತ್ರದುರ್ಗ ನಗರದ ಒನಕೆ ಒಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ್ಯಾಲಿ ಶನಿವಾರ ಆರಂಭವಾಯಿತು.
ಈಗಾಗಲೇ ಆನ್‍ಲೈನ್‍ನಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಇ) ಅರ್ಹತೆ ಪಡೆದ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಬೆಂಗಳೂರು ದಕ್ಷಿಣ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಬಳ್ಳಾರಿ, ಹಾಸನ, ಕೊಡಗು, ವಿಜಯನಗರ ಹಾಗೂ ಚಿತ್ರದುರ್ಗ ಸೇರಿದಂತೆ ಒಟ್ಟು 14 ಜಿಲ್ಲೆಗಳಿಂದ ಆಗಮಿಸಿದ ಅಭ್ಯರ್ಥಿಗಳು ರ್ಯಾಲಿಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ. ಅಗ್ನಿವೀರ್ ಸಾಮಾನ್ಯ ಕರ್ತವ್ಯ, ತಾಂತ್ರಿಕ ಹಾಗೂ ಟ್ರೇಡ್ಸ್ ವರ್ಗಗಳ ಹುದ್ದೆಗೆಳ ನೇಮಕಾತಿ ರ್ಯಾಲಿಯಲ್ಲಿ ಅಭ್ಯರ್ಥಿಗಳ ದೈಹಿಕ ಕ್ಷಮತೆ, ವೈದ್ಯಕೀಯ ಹಾಗೂ ವ್ಯಾಸಂಗ ಸೇರಿದಂತೆ ಇತರೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿದರು.
ಮುಂಜಾನೆ 5.30 ಗಂಟೆಯಿಂದಲೇ ಅಭ್ಯರ್ಥಿಗಳಿಗೆ ದೈಹಿಕ, ವೈದ್ಯಕೀಯ ಪರೀಕ್ಷೆಗಳು ನಡೆದಿದ್ದು, ಸುಮಾರು 120ಕ್ಕೂ ಹೆಚ್ಚು ಸೇನಾ ಅಧಿಕಾರಿಗಳು, ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಸೇನಾ ನೇಮಕಾತಿ ರ್ಯಾಲಿ ಹಿನ್ನೆಲೆಯಲ್ಲಿ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣಕ್ಕೆ ಸಾರ್ವಜನಿಕ ಪ್ರವೇಶ ನಿಷೇಧಿಸಿ, ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಅಭ್ಯರ್ಥಿಗಳಿಗೆ ಊಟ, ಉಪಾಹಾರ, ಕುಡಿಯುವ ನೀರು ಮತ್ತು ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗಿದೆ.
ಜಿಲ್ಲಾಧಿಕಾರಿ ಎಸ್.ರಮ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಹಾಗೂ ಸೇನಾ ನೇಮಕಾತಿ ಕಚೇರಿಯ ಬ್ರಿಗೇಡಿಯರ್ ಎಸ್.ಕೆ.ಸಿಂಗ್, ಕರ್ನಲ್ ಪುಷ್ಪರಾಜ್ ಅವರು ಕ್ರೀಡಾಂಗಣಕ್ಕೆ ಭೇಟಿ ನೀಡಿ ದೈಹಿಕ ಪರೀಕ್ಷೆಗಳ ಪ್ರಕ್ರಿಯೆಯನ್ನು ಪರಿಶೀಲಿಸಿದರು.
ನವೆಂಬರ್ 03 ರವೆರೆಗೆ ಸೇನಾ ನೇಮಕಾತಿ ರ್ಯಾಲಿ ನಡೆಯಲಿದ್ದು, ಈ ರ್ಯಾಲಿಯಲ್ಲಿ ಸುಮಾರು 957 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ನೇಮಕಾತಿ ರ್ಯಾಲಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಸೇನಾ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಿತು. ಅಭ್ಯರ್ಥಿಗಳ ಆನ್‍ಲೈನ್ ಪರೀಕ್ಷೆಯ ಫಲಿತಾಂಶ ಮತ್ತು ದೈಹಿಕ ಸಾಮಥ್ರ್ಯ ಪರೀಕ್ಷೆ ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ.











