ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಪಿಎಫ್ ಖಾತೆದಾರರಿಗೆ ಮತ್ತು ಕಂಪನಿಗಳ ಆಡಳಿತ ಮಂಡಳಿಗಳಿಗೆ ಮಹತ್ವದ ಸೂಚನೆಯೊಂದನ್ನು ರವಾನಿಸಿದೆ. ಸೆಪ್ಟೆಂಬರ್ ತಿಂಗಳ ಭವಿಷ್ಯ ನಿಧಿ (PF) ವಂತಿಕೆಯನ್ನು ನೌಕರರ ಖಾತೆಗೆ ಜಮೆ ಮಾಡಲು ಅಕ್ಟೋಬರ್ 15 ಅನ್ನು ಅಂತಿಮ ಗಡುವನ್ನಾಗಿ ನಿಗದಿಪಡಿಸಲಾಗಿದೆ. ಮುಂಬರುವ ದಸರಾ ಹಬ್ಬದ ವೇಳೆಗೆ ಉದ್ಯೋಗಿಗಳ ಖಾತೆಗೆ ಹಣ ತಲುಪುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಗಡುವಿನೊಳಗೆ ಇಸಿಆರ್ ಸಲ್ಲಿಕೆ ಕಡ್ಡಾಯ
ಇಪಿಎಫ್ಒ ನಿಯಮಾವಳಿಗಳ ಅನ್ವಯ, ಉದ್ಯೋಗದಾತ ಕಂಪನಿಗಳು ಪ್ರತಿ ತಿಂಗಳ 15ನೇ ತಾರೀಖಿನೊಳಗೆ ಹಿಂದಿನ ತಿಂಗಳ ಪಿಎಫ್ ಪಾಲನ್ನು ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳ ‘ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್’ (ಇಸಿಆರ್) ಅನ್ನು ಅಕ್ಟೋಬರ್ 15ರೊಳಗೆ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿ, ಬಾಕಿ ಮೊತ್ತವನ್ನು ಪಾವತಿಸಬೇಕೆಂದು ಇಪಿಎಫ್ಒ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಸ್ಪಷ್ಟಪಡಿಸಿದೆ. ನಿಗದಿತ ದಿನಾಂಕದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ಉದ್ಯೋಗಿಗಳ ಸಾಮಾಜಿಕ ಭದ್ರತೆಯನ್ನು ಬಲಪಡಿಸುವಂತೆ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ.
ನಿಯಮ ಉಲ್ಲಂಘಿಸಿದರೆ ಭಾರಿ ಬಡ್ಡಿ ಮತ್ತು ದಂಡ
ನಿಗದಿತ ಸಮಯಕ್ಕೆ ಇಸಿಆರ್ ಸಲ್ಲಿಸದೇ ಪಿಎಫ್ ಮೊತ್ತ ಜಮೆ ಮಾಡಲು ವಿಳಂಬ ಮಾಡುವ ಮಾಲೀಕರಿಗೆ ಕಠಿಣ ದಂಡದ ಎಚ್ಚರಿಕೆ ನೀಡಲಾಗಿದೆ. ಇಪಿಎಫ್ ಕಾಯ್ದೆಯ ಸೆಕ್ಷನ್ 7Q ಅಡಿಯಲ್ಲಿ ಬಾಕಿ ಇರುವ ಮೊತ್ತದ ಮೇಲೆ ವಾರ್ಷಿಕ ಶೇಕಡಾ 12ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ. ಇದರ ಜೊತೆಗೆ, ವಿಳಂಬವಾದ ಅವಧಿಯನ್ನು ಆಧರಿಸಿ ಬಾಕಿ ಮೊತ್ತದ ಮೇಲೆ ಶೇಕಡಾ 5ರಿಂದ 25ರವರೆಗೆ ಹೆಚ್ಚುವರಿ ದಂಡವನ್ನು ಸಂಸ್ಥೆಗಳು ತೆರಬೇಕಾಗುತ್ತದೆ.
ಖಾತೆಗೆ ಹಣ ಜಮೆಯಾಗದಿದ್ದರೆ ನೌಕರರು ಏನು ಮಾಡಬೇಕು?
ಸಾಮಾನ್ಯವಾಗಿ ಕಂಪನಿಗಳು ನೌಕರರ ವೇತನದಿಂದ ಪಿಎಫ್ ಮೊತ್ತವನ್ನು ಮುರಿದುಕೊಂಡು ಮುಂದಿನ ತಿಂಗಳು ಜಮೆ ಮಾಡುತ್ತವೆ. ಒಂದು ವೇಳೆ ನಿಗದಿತ ಗಡುವು ಮುಗಿದರೂ ಖಾತೆಗೆ ಹಣ ಜಮೆಯಾಗದಿದ್ದರೆ, ನೌಕರರು ಮೊದಲು ತಮ್ಮ ಸಂಸ್ಥೆಯ ಮಾನವ ಸಂಪನ್ಮೂಲ (ಹೆಚ್ಆರ್) ವಿಭಾಗವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಅಲ್ಲಿಂದ ಸೂಕ್ತ ಸ್ಪಂದನೆ ಸಿಗದಿದ್ದರೆ, ಇಪಿಎಫ್ಒ ಅಧಿಕೃತ ಆನ್ಲೈನ್ ಪೋರ್ಟಲ್ ಮೂಲಕ ನೇರವಾಗಿ ದೂರು ದಾಖಲಿಸಲು ಅವಕಾಶವಿದೆ.











