ನದೆಹಲಿ, ಸುದ್ದಿ ಒನ್, ಅಕ್ಟೋಬರ್.13 : ವಾಟ್ಸಾಪ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ಹೊಸ ರೀತಿಯ ವಂಚನೆಯ ಜಾಲವನ್ನು ಹೆಣೆದಿದ್ದು, ಕೇವಲ ಒಂದು ಸಂದೇಶಕ್ಕೆ ಪ್ರತ್ಯುತ್ತರ ನೀಡಿದರೂ ಬ್ಯಾಂಕ್ ಖಾತೆ ಖಾಲಿಯಾಗುವ ಆತಂಕ ಎದುರಾಗಿದೆ.
ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಅಥವಾ ಅಪರಿಚಿತ ಸಂಖ್ಯೆಗಳಿಂದ ವಾಟ್ಸಾಪ್ಗೆ ನಕಲಿ ಸಂದೇಶಗಳು ಬರುತ್ತಿದ್ದು, ಅದರಲ್ಲಿ ಬ್ಯಾಂಕ್ ಖಾತೆಯಿಂದ ಇಂತಿಷ್ಟು ಹಣ ಕಡಿತಗೊಂಡಿದೆ ಎಂದು ನಮೂದಿಸಲಾಗುತ್ತಿದೆ. ಒಂದು ವೇಳೆ ನೀವು ಈ ವಹಿವಾಟು ನಡೆಸಿಲ್ಲ ಎಂದಾದರೆ ತಕ್ಷಣವೇ ‘NO’ ಎಂದು ಉತ್ತರಿಸಿ ಎಂದು ಆ ಸಂದೇಶದಲ್ಲಿ ಕೋರಲಾಗಿರುತ್ತದೆ.
ಖಾತೆಯಿಂದ ಹಣ ಕಡಿತಗೊಂಡಿದೆ ಎಂಬ ಆತಂಕದಲ್ಲಿ ಬಳಕೆದಾರರು ತಾವು ಆ ವಹಿವಾಟು ಮಾಡಿಲ್ಲವೆಂದು ದೃಢಪಡಿಸಲು ತಕ್ಷಣ ‘NO’ ಎಂದು ರಿಪ್ಲೈ ನೀಡುತ್ತಾರೆ. ಆದರೆ ವಂಚಕರು ಹೂಡಿರುವ ಬಲೆ ಇರುವುದೇ ಇಲ್ಲಿ. ಬಳಕೆದಾರರು ‘NO’ ಎಂದು ಸಂದೇಶ ಕಳುಹಿಸುತ್ತಿದ್ದಂತೆ, ಹಿನ್ನೆಲೆಯಲ್ಲಿ ಮಾಲ್ವೇರ್ ಅಥವಾ ಸ್ಪೈವೇರ್ ಸಕ್ರಿಯಗೊಳ್ಳುತ್ತದೆ. ಇದು ಬಳಕೆದಾರರ ಮೊಬೈಲ್ನ ಸಂಪೂರ್ಣ ನಿಯಂತ್ರಣವನ್ನು ಹ್ಯಾಕರ್ಗಳ ಕೈಗೆ ಒಪ್ಪಿಸುತ್ತದೆ. ಇದರ ಪರಿಣಾಮವಾಗಿ ಮೊಬೈಲ್ನಲ್ಲಿರುವ ವೈಯಕ್ತಿಕ ಮಾಹಿತಿ, ಬ್ಯಾಂಕಿಂಗ್ ವಿವರಗಳು ಹಾಗೂ ಒಟಿಪಿಗಳನ್ನು ಸುಲಭವಾಗಿ ಕದ್ದು, ಸರಣಿ ವಹಿವಾಟುಗಳ ಮೂಲಕ ಬ್ಯಾಂಕ್ ಖಾತೆಯಲ್ಲಿರುವ ಪೂರ್ಣ ಮೊತ್ತವನ್ನು ಖಾಲಿ ಮಾಡಲಾಗುತ್ತಿದೆ ಎಂದು ಸೈಬರ್ ತಜ್ಞರು ಹಾಗೂ ಪೊಲೀಸರು ಎಚ್ಚರಿಸಿದ್ದಾರೆ.
ಇಂತಹ ವಂಚನೆಗಳಿಂದ ರಕ್ಷಣೆ ಪಡೆಯಲು ಅಪರಿಚಿತ ಅಥವಾ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಬರುವ ಬ್ಯಾಂಕಿಂಗ್ ಸಂದೇಶಗಳಿಗೆ ಯಾವುದೇ ಕಾರಣಕ್ಕೂ ಉತ್ತರಿಸಬಾರದು ಮತ್ತು ತಕ್ಷಣವೇ ಅಂತಹ ಸಂಖ್ಯೆಗಳನ್ನು ಬ್ಲಾಕ್ ಮಾಡಬೇಕು. ಖಾತೆಯಿಂದ ಹಣ ಕಡಿತಗೊಂಡಿರುವ ಸಂದೇಶಗಳು ಬಂದಾಗ ಗಾಬರಿಯಾಗದೆ, ಮೊದಲು ಬ್ಯಾಂಕಿನ ಅಧಿಕೃತ ಮೊಬೈಲ್ ಆ್ಯಪ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಖಾತೆಯ ಸ್ಟೇಟ್ಮೆಂಟ್ ಪರಿಶೀಲಿಸುವುದು ಸೂಕ್ತ. ಯಾವುದೇ ಸಂದೇಹಗಳಿದ್ದಲ್ಲಿ ಇಂಟರ್ನೆಟ್ನಲ್ಲಿ ಸಿಗುವ ಅನಧಿಕೃತ ಸಂಖ್ಯೆಗಳಿಗೆ ಕರೆ ಮಾಡದೆ, ಬ್ಯಾಂಕ್ ಪಾಸ್ಬುಕ್ ಅಥವಾ ಡೆಬಿಟ್ ಕಾರ್ಡ್ ಹಿಂಭಾಗದಲ್ಲಿರುವ ಅಧಿಕೃತ ಗ್ರಾಹಕ ಸೇವಾ ಕೇಂದ್ರದ ಸಂಖ್ಯೆಯನ್ನು ಮಾತ್ರ ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.










