ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕನ್ನಡ ಚಿತ್ರನಟಿ ರನ್ಯಾ ರಾವ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ಹಿನ್ನಡೆ ಎದುರಾಗಿದೆ. ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ (CEIB) ಹೊರಡಿಸಿದ್ದ ಮುನ್ನೆಚ್ಚರಿಕಾ ಬಂಧನ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ಸಮರ್ಥಿಸಿದ್ದು, ನಟಿಯ ಪರವಾಗಿ ಸಲ್ಲಿಸಲಾದ ಮೇಲ್ಮನವಿಗಳನ್ನು ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠ ಈ ತೀರ್ಪು ನೀಡಿದ್ದು, ರನ್ಯಾ ರಾವ್ ಅವರ ತಾಯಿ ಹಾಗೂ ಸಹಆರೋಪಿ ಸಾಹಿಲ್ ಸರ್ಕರಿಯಾ ಜೈನ್ ಅವರ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಗಳನ್ನು ತಳ್ಳಿ ಹಾಕಿದೆ. ತೀರ್ಪಿನಲ್ಲಿ, ಬಂಧನ ಕ್ರಮವು ಸಂವಿಧಾನದ ಅನುಚ್ಛೇದ 22(3)(ಬಿ) ಉಲ್ಲಂಘನೆಯಲ್ಲ ಎಂದು ಅಧಿಕಾರಿಗಳು ಸಮರ್ಪಕವಾಗಿ ಸಾಬೀತುಪಡಿಸಿರುವುದಾಗಿ ನ್ಯಾಯಪೀಠ ಸ್ಪಷ್ಟಪಡಿಸಿದೆ.ಇದೇ ವೇಳೆ, COFEPOSA ಕಾಯ್ದೆಯ ವಿಧಿ 8(ಇ) ಹಾಗೂ ಸಂವಿಧಾನದ ಸಂಬಂಧಿತ ನಿಯಮಗಳ ಪ್ರಕಾರ ಮುನ್ನೆಚ್ಚರಿಕಾ ಬಂಧನಕ್ಕೊಳಗಾದವರಿಗೆ ಕಾನೂನು ಸಹಾಯವನ್ನು ಹಕ್ಕಿನ ರೂಪದಲ್ಲಿ ಬೇಡುವ ಅವಕಾಶ ಇರುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರಗಳ ಪ್ರಕಾರ, 2025ರ ಮಾರ್ಚ್ 3ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಬಂಧಿತರಾಗಿದ್ದರು. ದುಬೈನಿಂದ ಅಕ್ರಮವಾಗಿ ಸುಮಾರು 14 ಕೆ.ಜಿ. ಚಿನ್ನವನ್ನು ಸಾಗಿಸುತ್ತಿದ್ದ ವೇಳೆ ಅವರು ಸಿಕ್ಕಿಬಿದ್ದಿದ್ದು, ದೇಹದಲ್ಲಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ 12.56 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
ಬಂಧನದ ಬಳಿಕ ಅವರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 2.67 ಕೋಟಿ ರೂಪಾಯಿ ನಗದು ಹಣವನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್‌ಐ, ಸಿಬಿಐ ಮತ್ತು ಜಾರಿಗೆ ನಿರ್ದೇಶನಾಲಯ (ED) ತನಿಖೆ ಮುಂದುವರಿಸಿದ್ದು, 2024ರಿಂದ 2025ರವರೆಗೆ ಒಟ್ಟು 102.55 ಕೋಟಿ ರೂಪಾಯಿ ಮೌಲ್ಯದ 127 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂಬ ಅಂಶವೂ ತನಿಖೆಯಲ್ಲಿ ಬಹಿರಂಗವಾಗಿದೆ.ಇದಲ್ಲದೆ, ಇದೇ ಪ್ರಕರಣದಲ್ಲಿ ಕೇಂದ್ರ ಸರ್ಕಾರ COFEPOSA ಕಾಯ್ದೆಯಡಿ ಕೈಗೊಂಡ ಬಂಧನ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಕೂಡ 2025ರ ಡಿಸೆಂಬರ್‌ನಲ್ಲಿ ಸಮರ್ಥಿಸಿತ್ತು. ಆರೋಪಿಗಳ ಕುಟುಂಬ ಸದಸ್ಯರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ವಜಾಗೊಳಿಸಿದ್ದ ನ್ಯಾಯಪೀಠ, ಬಂಧನ ಕ್ರಮ ಕಾನೂನುಬದ್ಧವಾಗಿದೆ ಎಂದು ತೀರ್ಪು ನೀಡಿತ್ತು.
ಈ ಬೆಳವಣಿಗೆಗಳ ಮಧ್ಯೆ, ಕಳೆದ ಒಂದು ವರ್ಷದಿಂದ ಜೈಲಿನಲ್ಲಿ ಇರುವ ರನ್ಯಾ ರಾವ್ ಅವರಿಗೆ ಸುಪ್ರೀಂ ಕೋರ್ಟ್ ತೀರ್ಪು ಮತ್ತೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದ್ದು, ಪ್ರಕರಣದ ಮುಂದಿನ ತನಿಖೆ ಮತ್ತು ವಿಚಾರಣೆ ಮೇಲಿನ ಗಮನ ಹೆಚ್ಚಾಗಿದೆ.















