ಸುದ್ದಿಒನ್, ಚಿತ್ರದುರ್ಗ, ಜೂನ್. 27 : ದಿವಂಗತ ಬಬ್ಲಿ ಬಾಯಿ ಹಂಜಾರಿಮಲ್ ಜೀ, ಚಿತ್ರದುರ್ಗ ಇವರ ಸ್ಮರಣಾರ್ಥವಾಗಿ ಶ್ರೀ ಜೈನ ಸಂಘ, ಚಿತ್ರದುರ್ಗ ಮತ್ತು ರೋಟರಿ ಬೆಂಗಳೂರು ಇಂದಿರಾನಗರ ಇವರ ಜಂಟಿ ಸಹಯೋಗದೊಂದಿಗೆ ನಗರದಲ್ಲಿ ಉಚಿತ ಮೆಗಾ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
ಈ ಬೃಹತ್ ಶಿಬಿರವು 2026ರ ಜೂನ್ 27ನೇ ಶನಿವಾರದಂದು ಚಿತ್ರದುರ್ಗದ ಶ್ರೀ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಬೆಂಗಳೂರಿನ ಪ್ರಾಜೆಕ್ಟ್ ದೃಷ್ಟಿ ತಂಡವು ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಡಲಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಬೆಂಗಳೂರಿನ ಡಾ. ಸೋಲಂಕಿ ಕಣ್ಣಿನ ಆಸ್ಪತ್ರೆ ಹಾಗೂ ಚಿಕ್ಕಬಳ್ಳಾಪುರದ ಜೈನ್ ಮಿಷನ್ ಆಸ್ಪತ್ರೆಯ ನುರಿತ ವೈದ್ಯರು ತಪಾಸಣೆ ನಡೆಸಲಿದ್ದಾರೆ. ಇಲ್ಲಿಯವರೆಗೆ ಡಾ. ಸೋಲಂಕಿ ಅವರು ಸುಮಾರು 3,45,000 ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಶಿಬಿರದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗುವ ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ (ಐಓಎಲ್ ಅಳವಡಿಕೆ) ಮಾಡಲಾಗುವುದು. ಅಲ್ಲದೆ, ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ಉಚಿತವಾಗಿ ಕನ್ನಡಕ, ಔಷಧಿ, ಊಟೋಪಚಾರ ಹಾಗೂ ವಸತಿ ಸೌಕರ್ಯಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತದೆ. ರಕ್ತದೊತ್ತಡ (ಬಿ.ಪಿ), ಸಕ್ಕರೆ ಕಾಯಿಲೆ, ಅಸ್ತಮಾ, ದಮ್ಮು ಹಾಗೂ ಇತರೆ ದೀರ್ಘಕಾಲದ ಕಾಯಿಲೆಗಳಿರುವ ರೋಗಿಗಳು ತಾವು ಪ್ರಸ್ತುತ ಬಳಸುತ್ತಿರುವ ಔಷಧಿಗಳು ಮತ್ತು ವೈದ್ಯರ ಚೀಟಿಯನ್ನು ಕಡ್ಡಾಯವಾಗಿ ಜೊತೆಯಲ್ಲಿ ತರಬೇಕು. ಇತರ ಯಾವುದೇ ಕಾಯಿಲೆಗಳಿದ್ದರೂ ತಪಾಸಣೆಯ ಮೊದಲೇ ವೈದ್ಯರಿಗೆ ತಿಳಿಸಿ ಸೂಕ್ತ ಸಲಹೆ ಪಡೆಯಲು ಕೋರಲಾಗಿದೆ. ರೋಗಿಗಳು ತಮ್ಮ ಜೊತೆಗೆ ಹಾಸಲು ಬೆಡ್ಶೀಟ್, ತಟ್ಟೆ ಮತ್ತು ಲೋಟವನ್ನು ತರಬೇಕಾಗಿ ವಿನಂತಿಸಲಾಗಿದೆ.
ಮುಂಗಡ ನೋಂದಣಿಗೆ ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತಿದ್ದು, ಆಸಕ್ತರು ಚಿತ್ರದುರ್ಗದ ಬಾಂಬೆ ಗ್ಲಾಸ್ ಹೌಸ್ (ನ್ಯೂ ಜೈನ್ ಟೆಂಪಲ್ ರಸ್ತೆ, ಲಕ್ಷ್ಮಿ ಬಜಾರ್ – ಮೊಬೈಲ್: 9448233592), ಶೂ ಸೈಕಲ್ ಇಂಪೋರ್ಟಿಂಗ್ ಕಂ. (ಎಸ್.ಕೆ.ಪಿ. ಬ್ಯಾಂಕ್ ರಸ್ತೆ, ಸಂತೆ ಹೊಂಡದ ಹಿಂಭಾಗ – ಮೊಬೈಲ್: 9886153590), ಬಸವೇಶ್ವರ ಆಸ್ಪತ್ರೆ, ಚಿತ್ರದುರ್ಗ, ಅಥವಾ ಧರ್ಮಶಾಲಾ ರಸ್ತೆಯ ಶ್ರೀ ಪಾರ್ಶ್ವನಾಥ ಎಜುಕೇಷನ್ ಸೊಸೈಟಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪಾರಸ್ ಜೈನ್ (9844500009) ಅಥವಾ ಕಲ್ಪೇಶ್ ಜೈನ್ (9886393967) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಲಾಗಿದೆ.











