ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಜಾಗತಿಕ ಮಾರುಕಟ್ಟೆ ಮೂಲಕ ಕರ್ನಾಟಕದ ರೈತರ ಮೇಲೂ ತೀವ್ರವಾಗಿ ಬೀಳತೊಡಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರಗಳ ಕೊರತೆ ಮತ್ತು ಸರಬರಾಜಿನ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪೋಟ್ಯಾಷ್ ಹಾಗೂ ಕಾಂಪ್ಲೆಕ್ಸ್ ರಸಗೊಬ್ಬರಗಳ ಬೆಲೆ ಗಗನಕ್ಕೇರಿದ್ದು, ಮುಂಗಾರು ಬಿತ್ತನೆಗೆ ಸಜ್ಜಾಗಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳ ದರ ಎರಡು ಬಾರಿ ಏರಿಕೆಯಾಗಿದೆ. ಮೇ ಆರಂಭದಲ್ಲಿ 50 ಕೆಜಿ ಚೀಲಕ್ಕೆ ₹1,400 ಇದ್ದ ದರ ಇದೀಗ ₹1,700ಕ್ಕೆ ತಲುಪಿದ್ದು, ಹೊಸ ದಾಸ್ತಾನುಗಳ ಬೆಲೆ ₹2,200ರವರೆಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ರಸಗೊಬ್ಬರ ವಿತರಕರು ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ಯೂರಿಯಾ ಹಾಗೂ ಡಿಎಪಿ (DAP) ರಸಗೊಬ್ಬರಗಳ ಬೆಲೆಯೂ ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆಯಾಗಿದ್ದರೂ, ಕೇಂದ್ರ ಸರ್ಕಾರ ನೀಡುತ್ತಿರುವ ಸಬ್ಸಿಡಿಯಿಂದ ಸದ್ಯ ರೈತರಿಗೆ ನಿಯಂತ್ರಿತ ದರದಲ್ಲೇ ಲಭ್ಯವಾಗುತ್ತಿದೆ. ಆದರೆ ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ಗೊಬ್ಬರಗಳಿಗೆ ನೀಡಲಾಗುತ್ತಿರುವ ಸಬ್ಸಿಡಿ ಸೀಮಿತವಾಗಿರುವುದರಿಂದ, ಕಂಪನಿಗಳು ತಮ್ಮ ಇಚ್ಛೆಯಂತೆ ದರ ನಿಗದಿ ಮಾಡುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಮುಂಗಾರು ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಈಗ ರಸಗೊಬ್ಬರ ಅತ್ಯಗತ್ಯವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಅಭಾವ ಮತ್ತು ಹೆಚ್ಚಿದ ಬೆಲೆಗಳಿಂದ ರೈತರು ತೀವ್ರ ಆರ್ಥಿಕ ಒತ್ತಡ ಎದುರಿಸುತ್ತಿದ್ದಾರೆ. “ಬಿತ್ತನೆಗೂ ಮುನ್ನವೇ ಗೊಬ್ಬರ ದರ ಏರಿಕೆಯಿಂದ ಕೃಷಿ ವೆಚ್ಚ ದ್ವಿಗುಣವಾಗಿದೆ” ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಫ್‌ಐಡಿ ಕಡ್ಡಾಯ; ಎಕರೆಗೆ ಒಂದು ಚೀಲ ಮಾತ್ರ
ಇದೀಗ ಯೂರಿಯಾ ಸೇರಿದಂತೆ ಹಲವು ರಸಗೊಬ್ಬರಗಳ ಖರೀದಿಗೆ ಎಫ್‌ಐಡಿ (Farmer ID) ಕಡ್ಡಾಯಗೊಳಿಸಲಾಗಿದೆ. ‘ಕೆ-ಕಿಸಾನ್’ ಆಪ್ ಮೂಲಕ ನೋಂದಣಿ ಮಾಡಿದ ರೈತರಿಗೆ ಮಾತ್ರ ರಸಗೊಬ್ಬರ ನೀಡಲಾಗುತ್ತಿದ್ದು, ಎಕರೆಗೆ ಒಂದು ಚೀಲ ಮಾತ್ರ ಖರೀದಿಸಲು ಅವಕಾಶ ನೀಡಲಾಗಿದೆ. ಒಮ್ಮೆ ಖರೀದಿ ಮಾಡಿದ ಬಳಿಕ ವ್ಯವಸ್ಥೆಯಲ್ಲಿ ಅದು ಲಾಕ್ ಆಗುವುದರಿಂದ ಮತ್ತೊಮ್ಮೆ ಖರೀದಿ ಸಾಧ್ಯವಾಗುವುದಿಲ್ಲ.
20 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ರೈತರು ಮಾತ್ರ ಬೆಳೆ ದೃಢೀಕರಣ ಪತ್ರ ಸಲ್ಲಿಸಿ ಹೆಚ್ಚುವರಿ ಗೊಬ್ಬರ ಪಡೆಯಬಹುದಾಗಿದೆ. ಈ ನಿಯಮಗಳಿಂದ ಸಣ್ಣ ಮತ್ತು ಮಧ್ಯಮ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.
ಹೆಚ್ಚುವರಿ ಸಬ್ಸಿಡಿಗೆ ರೈತರ ಆಗ್ರಹ
ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ಗೊಬ್ಬರಗಳ ದರ ನಿಯಂತ್ರಣಕ್ಕೆ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು. ಹೆಚ್ಚುವರಿ ಸಬ್ಸಿಡಿ ಘೋಷಿಸಿ ರೈತರಿಗೆ ನೆರವಾಗಬೇಕು. ಇಲ್ಲವಾದರೆ ಮುಂಗಾರು ಬಿತ್ತನೆ ಮೇಲೆಯೇ ಗಂಭೀರ ಪರಿಣಾಮ ಬೀಳಲಿದೆ ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









