ದೆಹಲಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ದೇಶದ ವಿವಿಧ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ (RRB) ಖಾಲಿ ಇರುವ ಬರೋಬ್ಬರಿ 13,706 ಹುದ್ದೆಗಳ ಭರ್ತಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಅಧಿಸೂಚನೆ ಹೊರಡಿಸಿದೆ.
ಈ ನೇಮಕಾತಿ ಅಭಿಯಾನದ ಮೂಲಕ ಗ್ರೂಪ್ ‘A’ ಅಧಿಕಾರಿಗಳು (ಆಫೀಸರ್ ಸ್ಕೇಲ್ 1, 2, 3) ಹಾಗೂ ಗ್ರೂಪ್ ‘B’ ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಒಟ್ಟು 13,706 ಹುದ್ದೆಗಳಲ್ಲಿ ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) ಹುದ್ದೆಗಳಿಗೆ ಗರಿಷ್ಠ 8,183 ಸ್ಥಾನಗಳನ್ನು ಮೀಸಲಿಡಲಾಗಿದೆ. ಅಧಿಕಾರಿ ಹುದ್ದೆಗಳ ಪೈಕಿ ಆಫೀಸರ್ ಸ್ಕೇಲ್-1 (ಅಸಿಸ್ಟೆಂಟ್ ಮ್ಯಾನೇಜರ್) 4,256, ಆಫೀಸರ್ ಸ್ಕೇಲ್-2 ಜನರಲ್ ಬ್ಯಾಂಕಿಂಗ್ ಆಫೀಸರ್ 666, ಐಟಿ ಆಫೀಸರ್ 182, ಚಾರ್ಟರ್ಡ್ ಅಕೌಂಟೆಂಟ್ 81, ಕಾನೂನು ಅಧಿಕಾರಿ 46, ಕೃಷಿ ಅಧಿಕಾರಿ 38, ಟ್ರೆಷರಿ ಮ್ಯಾನೇಜರ್ 18 ಹಾಗೂ ಮಾರ್ಕೆಟಿಂಗ್ ಆಫೀಸರ್ ವಿಭಾಗದಲ್ಲಿ 16 ಹುದ್ದೆಗಳಿವೆ. ಉಳಿದಂತೆ ಆಫೀಸರ್ ಸ್ಕೇಲ್-3 (ಸೀನಿಯರ್ ಮ್ಯಾನೇಜರ್) ವಿಭಾಗದಲ್ಲಿ 220 ಹುದ್ದೆಗಳು ಖಾಲಿ ಇವೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:
ಆಫೀಸ್ ಅಸಿಸ್ಟೆಂಟ್: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು. ಸ್ಥಳೀಯ ಭಾಷಾ ಜ್ಞಾನ ಹಾಗೂ ಕಂಪ್ಯೂಟರ್ ನಿರ್ವಹಣೆ ತಿಳಿದಿರಬೇಕು. ವಯೋಮಿತಿ 18 ರಿಂದ 28 ವರ್ಷ.
ಆಫೀಸರ್ ಸ್ಕೇಲ್-1 (ಅಸಿಸ್ಟೆಂಟ್ ಮ್ಯಾನೇಜರ್): ಯಾವುದೇ ಪದವಿ ಪೂರ್ಣಗೊಳಿಸಿರಬೇಕು. ಕೃಷಿ, ತೋಟಗಾರಿಕೆ, ಮಾಹಿತಿ ತಂತ್ರಜ್ಞಾನ, ಅರ್ಥಶಾಸ್ತ್ರ ಅಥವಾ ಕಾನೂನು ಪದವೀಧರರಿಗೆ ಆದ್ಯತೆ ಇರುತ್ತದೆ. ವಯೋಮಿತಿ 18 ರಿಂದ 30 ವರ್ಷ.
ಆಫೀಸರ್ ಸ್ಕೇಲ್-2: ಕನಿಷ್ಠ 50% ಅಂಕಗಳೊಂದಿಗೆ ಸಂಬಂಧಿಸಿದ ವಿಷಯದಲ್ಲಿ ಪದವಿ, ಸಿಎ, ಎಂಬಿಎ ಅಥವಾ ಕಾನೂನು ಪದವಿಯೊಂದಿಗೆ 1 ರಿಂದ 2 ವರ್ಷಗಳ ಕಾರ್ಯಾನುಭವ ಕಡ್ಡಾಯ. ವಯೋಮಿತಿ 21 ರಿಂದ 32 ವರ್ಷ.
ಆಫೀಸರ್ ಸ್ಕೇಲ್-3: ಕನಿಷ್ಠ 50% ಅಂಕಗಳೊಂದಿಗೆ ಪದವಿ ಹಾಗೂ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ 5 ವರ್ಷಗಳ ಕಾಲ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವಿರಬೇಕು. ವಯೋಮಿತಿ 21 ರಿಂದ 40 ವರ್ಷ.
ನಿಯಮಾನುಸಾರ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯವಾಗಲಿದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ ₹850 ಶುಲ್ಕ ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ₹175 ಶುಲ್ಕ ಇರಲಿದೆ. ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಆನ್‌ಲೈನ್‌ನಲ್ಲೇ ಪಾವತಿಸಬೇಕು.
ಅಭ್ಯರ್ಥಿಗಳನ್ನು ಪ್ರಾಥಮಿಕ ಪರೀಕ್ಷೆ (ಪ್ರಿಲಿಮ್ಸ್), ಮುಖ್ಯ ಪರೀಕ್ಷೆ (ಮೇನ್ಸ್) ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಸಂದರ್ಶನ ಇರುವುದಿಲ್ಲ; ಬದಲಾಗಿ ಲಿಖಿತ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ಐಬಿಪಿಎಸ್‌ನ ಅಧಿಕೃತ ಜಾಲತಾಣವಾದ www.ibps.in ಗೆ ಭೇಟಿ ನೀಡಿ ಸೆಪ್ಟೆಂಬರ್ 27ರ ಒಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿಕೊಳ್ಳುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.












