ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ : ದೈನಂದಿನ ಬದುಕಿನಲ್ಲಿ ಅತಿ ಸಣ್ಣದಾಗಿ ಕಾಣುವ, ಆದರೆ ಅಡುಗೆಮನೆಯಿಂದ ಹಿಡಿದು ದೇವರ ಪೂಜೆಯವರೆಗೂ ಅನಿವಾರ್ಯವಾಗಿರುವ ನಿಂಬೆಹಣ್ಣು ಇಂದು ಮಾರುಕಟ್ಟೆಯಲ್ಲಿ ತನ್ನ ಬೆಲೆಯ ಮೂಲಕವೇ ಎಲ್ಲರ ಕಣ್ಣಲ್ಲಿ ನೀರು ತರಿಸುತ್ತಿದೆ.
ಒಂದು ಕಾಲದಲ್ಲಿ ಕೇವಲ ಒಂದು ರೂಪಾಯಿಗೆ ಸಿಗುತ್ತಿದ್ದ ನಿಂಬೆಹಣ್ಣು ಇಂದು 12 ರೂಪಾಯಿ ಆಗಿದೆ. ಇಂದು ಗ್ರಾಹಕರು ನಿಂಬೆಹಣ್ಣು ಕೊಳ್ಳಲು ನೂರು ಬಾರಿ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಯಲ್ಲಿ ಇದರ ದರ ಕೇಳಿದಾಕ್ಷಣ ಜನಸಾಮಾನ್ಯರು ದಂಗಾಗಿ ನಿಟ್ಟುಸಿರು ಬಿಡುತ್ತಿದ್ದಾರೆ.

ಈ ದರ ಏರಿಕೆಯ ಹಿಂದೆ ಪ್ರಕೃತಿಯ ಮುನಿಸೇ ಪ್ರಮುಖ ಕಾರಣವಾಗಿದೆ. ಮಳೆಯ ಕೊರತೆ ಹಾಗೂ ತೀವ್ರ ನೀರಿನ ಅಭಾವದಿಂದಾಗಿ ನಿಂಬೆ ಇಳುವರಿ ಗಣನೀಯವಾಗಿ ಕುಸಿದಿದೆ. ಬಿಸಿಲ ಬೇಗೆ ಹೆಚ್ಚುತ್ತಿದ್ದಂತೆ ಬೇಡಿಕೆ ದುಪ್ಪಟ್ಟಾಗಿದ್ದರೆ, ಮಾರುಕಟ್ಟೆಗೆ ಬರುವ ಆವಕ ತೀರಾ ಕ್ಷೀಣಿಸಿದೆ. ಈ ಹಿಂದೆ ಪ್ರತಿ ಕೆಜಿಗೆ ನಲವತ್ತರಿಂದ ಐವತ್ತು ರೂಪಾಯಿಗೆ ಸಿಗುತ್ತಿದ್ದ ನಿಂಬೆಹಣ್ಣು, ಇಂದು ಬರೋಬ್ಬರಿ 300-400 ರೂಪಾಯಿಗೆ ಮುಟ್ಟಿದೆ. ಇತಿಹಾಸದಲ್ಲೇ ಕಾಣದ ಇಂತಹ ದರ ಏರಿಕೆ ಮಧ್ಯಮ ಹಾಗೂ ಕೆಳವರ್ಗದ ಜನರ ಬಜೆಟ್ಗೆ ಭಾರಿ ಹೊಡೆತ ನೀಡಿದೆ.
ಬೇಸಿಗೆಯ ಧಗೆಯಿಂದ ಪಾರಾಗಲು ತಂಪಾದ ಶರಬತ್ತಿನ ಮೊರೆ ಹೋಗುವ ಜನರಿಗೆ ಈ ಬೆಲೆ ಶಾಕ್ ನೀಡಿದೆ. ಇನ್ನು ನಿಂಬೆರಸವಿಲ್ಲದೆ ಊಟದ ತಟ್ಟೆ ಅಪೂರ್ಣ. ಸಸ್ಯಹಾರಿಗಳ ಪಲ್ಯ, ಸಾರು, ಚಿತ್ರಾನ್ನದಿಂದ ಹಿಡಿದು ಮಾಂಸಾಹಾರಿಗಳ ಘಮಘಮಿಸುವ ಅಡುಗೆಯವರೆಗೆ ನಿಂಬೆಯ ಹುಳಿ ಅನಿವಾರ್ಯ. ಆದರೆ ಬೆಲೆಯ ಬಿಸಿಗೆ ಗ್ರಾಹಕರು ನಿಂಬೆಹಣ್ಣಿನ ಬಳಕೆಯನ್ನು ಕಡಿತಗೊಳಿಸುವಂತಾಗಿದೆ.
ಇದಲ್ಲದೆ, ನಮ್ಮ ಸಂಸ್ಕೃತಿಯಲ್ಲಿ ನಿಂಬೆಹಣ್ಣಿಗೆ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಮಹತ್ವವಿದೆ. ಪ್ರತಿ ಅಮಾವಾಸ್ಯೆಯಂದು ವಾಹನಗಳನ್ನು ತೊಳೆದು, ದುಷ್ಟ ದೃಷ್ಟಿ ನಿವಾರಣೆಗೆ ಚಕ್ರಗಳ ಕೆಳಗೆ ನಿಂಬೆಹಣ್ಣಿಟ್ಟು ವಾಹನ ಚಲಾಯಿಸುವ ಆಚರಣೆ ಹಿಂದಿನಿಂದಲೂ ನಡೆದುಬಂದಿದೆ. ದೇವಸ್ಥಾನಗಳಿಗೆ ತೆರಳುವ ಭಕ್ತರು ದೇವರ ಪಾದಕ್ಕೆ, ಮಾಲೆಗೆ ನಿಂಬೆಹಣ್ಣು ಸಮರ್ಪಿಸುವುದು ನಿತ್ಯದ ಕಾಯಕ. ಆದರೆ ಇಂದು ದೇವರ ಸೇವೆಗೂ, ವಾಹನ ಪೂಜೆಗೂ ನಿಂಬೆಹಣ್ಣು ಕೊಳ್ಳಲು ಭಕ್ತರು ಬೆಚ್ಚಿಬೀಳುವಂತಾಗಿದೆ.

ಹಾಲು, ತರಕಾರಿ ಅಥವಾ ಗ್ಯಾಸ್ ಬೆಲೆ ಕೇವಲ ಒಂದೆರಡು ರೂಪಾಯಿ ಹೆಚ್ಚಾದರೂ ಆಕ್ರೋಶ ಹೊರಹಾಕುವ, ಚರ್ಚೆ ನಡೆಸುವ ಸಮಾಜ, ನಿಂಬೆಹಣ್ಣಿನ ಬೆಲೆ ನಾಲ್ಕು ಪಟ್ಟು ಹೆಚ್ಚಾದರೂ ತುಟಿಪಿಟಿಕ್ ಎನ್ನದೆ ಮೌನಕ್ಕೆ ಶರಣಾಗಿರುವುದು ಮಾತ್ರ ವಿಪರ್ಯಾಸ. ಇದು ತಾತ್ಕಾಲಿಕ, ಬೇಸಿಗೆ ಮುಗಿದರೆ ಸರಿಯಾಗಬಹುದು ಎಂಬ ಉದಾಸೀನವೋ ತಿಳಿಯದಾಗಿದೆ. ಒಟ್ಟಿನಲ್ಲಿ, ಹುಳಿಯ ರುಚಿಯ ನಿಂಬೆಹಣ್ಣು ಇಂದು ಜನಸಾಮಾನ್ಯರ ಪಾಲಿಗೆ ಕಹಿಯಾಗಿ ಪರಿಣಮಿಸಿರುವುದಂತೂ ಕಟು ಸತ್ಯ.









