ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 24 : ಸಾರ್ವಜನಿಕರು ಹಾಗೂ ವ್ಯಾಪಾರಸ್ಥರ ಅನುಕೂಲಕ್ಕಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ವತಿಯಿಂದ ನಾಳೆ (ಸೆಪ್ಟೆಂಬರ್ 25ರ ಶುಕ್ರವಾರದಂದು) ಹೊಳಲ್ಕೆರೆಯಲ್ಲಿ ವಿಶೇಷ ‘ನಾಣ್ಯ ಮೇಳ’ ಹಾಗೂ ‘ನೋಟು ವಿನಿಮಯ ಮೇಳ’ವನ್ನು ಆಯೋಜಿಸಲಾಗಿದೆ.
ಚಿತ್ರದುರ್ಗದ ಐ.ಯು.ಡಿ.ಪಿ. ಲೇಔಟ್ನಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಕರೆನ್ಸಿ ಚೆಸ್ಟ್ ಶಾಖೆ ಹಾಗೂ ಹೊಳಲ್ಕೆರೆ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಈ ಮೇಳ ನಡೆಯಲಿದೆ. ಹೊಳಲ್ಕೆರೆ ಶಾಖೆಯ ಆವರಣದಲ್ಲಿ ಅಂದು ಬೆಳಿಗ್ಗೆ 11:00 ರಿಂದ ಸಂಜೆ 04:00 ಗಂಟೆಯವರೆಗೆ ಸಾರ್ವಜನಿಕರಿಗೆ ಈ ಸೇವೆ ಲಭ್ಯವಿರಲಿದೆ.

ಈ ಮೇಳದಲ್ಲಿ 1, 2, 5, 10 ಹಾಗೂ 20 ರೂ. ಮುಖಬೆಲೆಯ ಹೊಸ ನಾಣ್ಯಗಳನ್ನು ಪಡೆಯಬಹುದಾಗಿದ್ದು, ಹಳೆಯ ಹಾಗೂ ಚಲಾವಣೆಗೆ ಯೋಗ್ಯವಲ್ಲದ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯ ಸಾರ್ವಜನಿಕರು, ವ್ಯಾಪಾರಿಗಳು ಮತ್ತು ಗ್ರಾಹಕರು ಈ ಸೌಲಭ್ಯದ ಸದುಪಯೋಗ ಪಡೆಯಲು ಕೋರಲಾಗಿದೆ.










