ಸುದ್ದಿಒನ್, ಬೆಂಗಳೂರು, ಮೇ.06 : ಮಾರಣಾಂತಿಕ ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ನೋವು ನಿವಾರಣೆ ಮತ್ತು ಮಾನಸಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಬೆಂಗಳೂರಿನ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ನೂತನ ‘ಪ್ಯಾಲಿಯೇಟಿವ್ ಕೇರ್’ (ಉಪಶಮನಕಾರಿ ಆರೈಕೆ) ವಿಭಾಗವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಉದ್ಘಾಟಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ‘ಶರಣಂ ಇಂಡಿಯಾ’ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ವಿಭಾಗವನ್ನು ಆರಂಭಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದ, ಅಸಾಧಾರಣ ನೋವು ಹಾಗೂ ಮಾನಸಿಕ ಒತ್ತಡ ಅನುಭವಿಸುತ್ತಿರುವ ರೋಗಿಗಳಿಗೆ ಈ ಕೇಂದ್ರವು ವರದಾನವಾಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, “ಉಪಶಮನ ಆರೈಕೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಬೆಂಗಳೂರಿನ 4-5 ಕಡೆಗಳಲ್ಲಿ ಇಂತಹ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಇದು ಅನಗತ್ಯ ಆಸ್ಪತ್ರೆ ಭೇಟಿಗಳನ್ನು ಕಡಿಮೆ ಮಾಡುವುದಲ್ಲದೆ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಸರೆಯಾಗಲಿದೆ,” ಎಂದು ತಿಳಿಸಿದರು.
ಆರಂಭಿಕ ಹಂತದಲ್ಲೇ ಇಂತಹ ಆರೈಕೆ ಲಭ್ಯವಾಗುವುದರಿಂದ ರೋಗಿಯ ನೆಮ್ಮದಿ ಹೆಚ್ಚಲಿದ್ದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಇದೊಂದು ಮಾನವೀಯ ಮತ್ತು ಸುಲಭವಾಗಿ ಲಭ್ಯವಾಗುವ ಸೇವೆಯಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ.
ರೋಗಿಗಳು ಮತ್ತು ಅವರ ಕುಟುಂಬದವರ ಜೀವನದ ಗುಣಮಟ್ಟ ಸುಧಾರಿಸಲು ಇಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೊರರೋಗಿ ವಿಭಾಗ (OPD): ತಜ್ಞ ವೈದ್ಯರ ಮೂಲಕ ನೋವು ನಿವಾರಣೆ ಮತ್ತು ಆಪ್ತಸಮಾಲೋಚನೆ ಲಭ್ಯ.ಡೇ-ಕೇರ್ ಸೌಲಭ್ಯ: ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲದೆಯೇ ಮೂಲಭೂತ ಚಿಕಿತ್ಸೆ ಪಡೆಯುವ ವ್ಯವಸ್ಥೆ.ಒಳರೋಗಿ ವಿಭಾಗ: ಸಂಕೀರ್ಣ ಆರೈಕೆ ಮತ್ತು ಜೀವನದ ಅಂತಿಮ ಹಂತದಲ್ಲಿರುವವರಿಗಾಗಿ ಆರು ಹಾಸಿಗೆಗಳ ವಿಶೇಷ ವಾರ್ಡ್.ಮನೆ-ಮನೆಗೆ ಆರೈಕೆ (Home Care): ಆಸ್ಪತ್ರೆಯ ಸುತ್ತಮುತ್ತಲಿನ 5 ರಿಂದ 8 ಕಿ.ಮೀ ವ್ಯಾಪ್ತಿಯಲ್ಲಿ ಸಂಚಾರಿ ಘಟಕದ ಮೂಲಕ ಮನೆಗೆ ತೆರಳಿ ಚಿಕಿತ್ಸೆ ನೀಡುವ ಸೌಲಭ್ಯ, ಮಾನಸಿಕ-ಸಾಮಾಜಿಕ ಬೆಂಬಲ: ರೋಗಿಗಳು ಹಾಗೂ ಅವರ ಆರೈಕೆ ಮಾಡುವ ಕುಟುಂಬದವರಿಗೆ ಪುನರ್ವಸತಿ ಮತ್ತು ಧೈರ್ಯ ತುಂಬುವ ಕಾರ್ಯಕ್ರಮಗಳು ಇರಲಿವೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















