ಚಿತ್ರದುರ್ಗ. ಜುಲೈ21: ಹವಾಮಾನ ವೈಪರೀತ್ಯ ಹಾಗೂ ನೀರಿನ ಅಭಾವದ ಹಿನ್ನೆಲೆಯಲ್ಲಿ ಅಡಿಕೆ ಮತ್ತು ತೆಂಗಿನ ತೋಟಗಳನ್ನು ಉಳಿಸಿಕೊಳ್ಳುವ ಹಾಗೂ ತೇವಾಂಶ ಸಂರಕ್ಷಣೆ ಮಾಡುವ ಕುರಿತು ತೋಟಗಾರಿಕೆ ಇಲಾಖೆ ವತಿಯಿಂದ ಸೋಮವಾರ ಚಿತ್ರದುರ್ಗ ತಾಲೂಕಿನ ಕಸಬಾ ಹೋಬಳಿಯ ಜಾನಕೊಂಡ ಮತ್ತು ಜೆ.ಎನ್. ಕೋಟೆ ಗ್ರಾಮಗಳಲ್ಲಿ ಕ್ಷೇತ್ರ ತರಬೇತಿ ಕಾರ್ಯಕ್ರಮ ನಡೆಯಿತು.
ಎಲ್ ನಿನೋ ಪರಿಣಾಮದಿಂದಾಗಿ ಮಳೆ ಅಭಾವ ಎದುರಾಗಿದ್ದು, ಜಿಲ್ಲೆಯಲ್ಲಿ ತೀವ್ರ ಉಷ್ಣಾಂಶ ಹೆಚ್ಚಿ ನೀರಿನ ಕೊರತೆ ಉಂಟಾಗಿದೆ. ಇದರಿಂದ ಅಡಿಕೆ ಮತ್ತು ತೆಂಗು ಬೆಳೆಗಳ ಬೆಳವಣಿಗೆ ಕುಂಠಿತಗೊಂಡು, ರೈತರ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಲಭ್ಯವಿರುವ ನೀರನ್ನು ವೈಜ್ಞಾನಿಕವಾಗಿ ಬಳಸಿ, ತೇವಾಂಶ ಕಾಪಾಡಿಕೊಳ್ಳುವ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಪ್ರಾಯೋಗಿಕವಾಗಿ ವಿವರಿಸಲಾಯಿತು.
ತೆಂಗು ಮತ್ತು ಅಡಿಕೆ ಗಿಡಗಳ ಬುಡದಲ್ಲಿ ಸಿಪ್ಪೆಗಳನ್ನು ಹೂಳುವುದು, ಒಣ ಎಲೆಗಳು ಹಾಗೂ ಹಸಿರು ಗೊಬ್ಬರದ ಎಲೆಗಳಿಂದ ಮಲ್ಚಿಂಗ್ (ಹೊದಿಕೆ) ಮಾಡುವುದು, ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೆÇೀಸ್ಟ್ ಮಾಡಿದ ‘ಕಾಯರ್ ಪಿಥ್’ ಮಣ್ಣಿನಲ್ಲಿ ಸೇರಿಸುವುದು ಮತ್ತು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ನೀರಿನಲ್ಲಿ ಕರಗುವ ಪೋಷಕಾಂಶಗಳನ್ನು ಒದಗಿಸುವುದರಿಂದ ಬರದ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ತಿಳಿಸಲಾಯಿತು.
ತರಬೇತುದಾರರಾಗಿ ಭಾಗವಹಿಸಿದ್ದ ಹಿರಿಯೂರು ತಾಲೂಕು ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಓಂಕಾರಪ್ಪ ಮಾತನಾಡಿ, ಬರದ ಸಮಯದಲ್ಲಿ ಅಡಿಕೆ ಮತ್ತು ತೆಂಗು ಬೆಳೆಗಳಲ್ಲಿ ಕಂಡುಬರುವ ಕೀಟ ಹಾಗೂ ರೋಗ ಬಾಧೆಗಳು ಮತ್ತು ಅವುಗಳ ಹತೋಟಿ ಕ್ರಮಗಳ ಬಗ್ಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ. ದೇವರಾಜು, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಸುರೇಶ್, ವೆಂಕಟೇಶ್ ನಾಯ್ಕ್, ಜಾನಕೊಂಡ ಗ್ರಾಮದ ಪ್ರಗತಿಪರ ರೈತರಾದ ಅಶೋಕ, ಮಹಾಲಿಂಗಪ್ಪ, ಆನಂದಪ್ಪ, ಶಿವಲಿಂಗಪ್ಪ, ಸುರೇಶ ಹಾಗೂ ಜೆ.ಎನ್. ಕೋಟೆ ಗ್ರಾಮದ ರೈತರಾದ ಮಂಜುನಾಥ, ಸುರೇಶ, ರುದ್ರಮುನಿಯಪ್ಪ, ನಿಂಗಪ್ಪ, ಪ್ರಸನ್ನಕುಮಾರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹಲವಾರು ರೈತರು ಭಾಗವಹಿಸಿ ತಮ್ಮ ಶಂಕೆಗಳನ್ನು ಪರಿಹರಿಸಿಕೊಂಡರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









