ಇಂದಿನ ಜೀವನಶೈಲಿಯಲ್ಲಿ ಪ್ರತಿಯೊಬ್ಬರನ್ನೂ ಒತ್ತಡ ಮತ್ತು ಆತಂಕದ ಸಮಸ್ಯೆಗಳು ಕಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ. ಇದಕ್ಕಾಗಿ ಪ್ರತಿದಿನ ಸ್ವಲ್ಪ ಸಮಯ ಧ್ಯಾನ (ಮೆಡಿಟೇಷನ್) ಮಾಡುವುದು ಒಳ್ಳೆಯ ಅಭ್ಯಾಸ ಎಂದು ತಜ್ಞರು ಸೂಚಿಸುತ್ತಾರೆ. ದಿನಕ್ಕೆ ಕೇವಲ 10 ನಿಮಿಷ ಧ್ಯಾನ ಮಾಡಿದರೂ ಸಹ ಮಾನಸಿಕ ನೆಮ್ಮದಿಯ ಜೊತೆಗೆ ಹತ್ತು ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆ ಪ್ರಯೋಜನಗಳು ಹೀಗಿವೆ:
1. ಒತ್ತಡ ನಿವಾರಣೆ:
ಬೆಳಗ್ಗೆ ಧ್ಯಾನ ಮಾಡುವುದರಿಂದ ದೇಹದಲ್ಲಿ ಒತ್ತಡಕ್ಕೆ ಕಾರಣವಾಗುವ ‘ಕಾರ್ಟಿಸಾಲ್’ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಮನಸ್ಸು ಶಾಂತವಾಗಿ, ಆತಂಕ ಮತ್ತು ಟೆನ್ಶನ್ ದೂರವಾಗುತ್ತದೆ.
2. ಏಕಾಗ್ರತೆ ಹೆಚ್ಚುತ್ತದೆ:
ಪ್ರತಿದಿನ ಧ್ಯಾನ ಮಾಡುವವರಿಗೆ ಕೆಲಸದ ಮೇಲಿನ ಗಮನ ಹೆಚ್ಚಿರುತ್ತದೆ. ಅನ್ಯಮನಸ್ಕತೆ ಕಡಿಮೆಯಾಗಿ ಏಕಾಗ್ರತೆ ಮತ್ತು ಆಲೋಚನಾ ಶಕ್ತಿ ಸುಧಾರಿಸುತ್ತದೆ. ಇದರಿಂದ ಯಾವುದೇ ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳಲು ಸಹಾಯವಾಗುತ್ತದೆ.

3. ಮನಸ್ಸು ಪ್ರಶಾಂತವಾಗಿರುತ್ತದೆ:
ಧ್ಯಾನವು ಮನಸ್ಸನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಇದು ಕಿರಿಕಿರಿ ಮತ್ತು ಕೋಪವನ್ನು ಕಡಿಮೆ ಮಾಡಿ, ಮಾನಸಿಕವಾಗಿ ಪ್ರಶಾಂತವಾಗಿರಲು ನೆರವಾಗುತ್ತದೆ.
4. ದೈಹಿಕ ಶಕ್ತಿ ವೃದ್ಧಿ:
ಬೆಳಗ್ಗಿನ ಸಮಯದಲ್ಲಿ ಧ್ಯಾನ ಮಾಡುವುದರಿಂದ ದೇಹದಲ್ಲಿ ಆಮ್ಲಜನಕದ (ಆಕ್ಸಿಜನ್) ಸಂಚಾರ ಸುಧಾರಿಸುತ್ತದೆ. ಇದರಿಂದ ದಿನವಿಡೀ ಉತ್ಸಾಹ ಮತ್ತು ಶಕ್ತಿಯಿಂದ ಇರಲು ಸಾಧ್ಯವಾಗುತ್ತದೆ.
5. ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ:
ಧ್ಯಾನ ಮಾಡುವುದರಿಂದ ದೇಹವು ಯಾವುದೇ ಕಾಯಿಲೆಯಿಂದ ತ್ವರಿತವಾಗಿ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆಯುತ್ತದೆ. ನಿಯಮಿತವಾಗಿ ಧ್ಯಾನ ಮಾಡುವವರಿಗೆ ಅನಾರೋಗ್ಯದ ಸಮಸ್ಯೆಗಳು ಬರುವ ಸಾಧ್ಯತೆ ತೀರಾ ಕಡಿಮೆ ಎಂದು ತಜ್ಞರು ಹೇಳುತ್ತಾರೆ.
6. ರಕ್ತದೊತ್ತಡ ನಿಯಂತ್ರಣ:
ಧ್ಯಾನವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಅಧಿಕ ರಕ್ತದೊತ್ತಡ (ಹೈ ಬಿಪಿ) ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
7. ಉತ್ತಮ ನಿದ್ದೆ:
ಅನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಧ್ಯಾನವು ತುಂಬಾ ಉಪಯುಕ್ತವಾಗಿದೆ. ಇದು ಮನಸ್ಸನ್ನು ಶಾಂತಗೊಳಿಸಿ, ರಾತ್ರಿ ನಿರಾಳವಾಗಿ ಮತ್ತು ಉತ್ತಮವಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ.
(ಗಮನಿಸಿ: ಈ ಮೇಲಿನ ಮಾಹಿತಿಯನ್ನು ಇಂಟರ್ನೆಟ್‌ನಲ್ಲಿ ಲಭ್ಯವಿರುವ ವಿವರಗಳ ಆಧಾರದ ಮೇಲೆ ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರಗಳಿಗೆ ತಜ್ಞರ ಸಲಹೆ ಪಡೆಯುವುದು ಉತ್ತಮ.)


















