ಇಂದಿನ ಬಿಡುವಿಲ್ಲದ ಜೀವನಶೈಲಿ ಮತ್ತು ನಿರಂತರ ಓಟದ ನಡುವೆ, ನಮಗೆ ತಿಳಿಯದಂತೆ ನಾವು ಕಳೆದುಕೊಳ್ಳುತ್ತಿರುವುದು ನೆಮ್ಮದಿಯ ನಿದ್ದೆಯನ್ನು. ಹೌದು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಅದು ನಿದ್ದೆಯ ಕೊರತೆ.
ತಡರಾತ್ರಿಯವರೆಗೆ ಮೊಬೈಲ್ ಬಳಕೆ, ಅನಿಯಮಿತ ಮಲಗುವ ಸಮಯ, ಕೆಲಸದ ಒತ್ತಡ, ಅತಿಯಾದ ಕೆಫೀನ್ (ಟೀ/ಕಾಫಿ) ಸೇವನೆ ಮತ್ತು ದೈಹಿಕ ಶ್ರಮದ ಕೊರತೆಯು ನಮ್ಮ ನಿದ್ದೆಯ ಗುಣಮಟ್ಟವನ್ನು ಕೆಡಿಸುತ್ತಿದೆ. ಪರಿಣಾಮವಾಗಿ, ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.ಆದರೆ, ಉತ್ತಮ ದಿನಚರಿಯೊಂದಿಗೆ ನಮ್ಮ ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹಾಗಾದರೆ, ರಾತ್ರಿ ಚೆನ್ನಾಗಿ ನಿದ್ದೆ ಬರಲು ಯಾವ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ಇಲ್ಲಿ ತಿಳಿಯಿರಿ:
1. ಬಾದಾಮಿ
ಬಾದಾಮಿಯಲ್ಲಿ ಮೆಗ್ನೀಸಿಯಮ್, ಪ್ರೊಟೀನ್ ಮತ್ತು ಆರೋಗ್ಯಕರ ಕೊಬ್ಬಿನಾಂಶಗಳು (Healthy Fats) ಹೇರಳವಾಗಿವೆ. ರಾತ್ರಿ ಮಲಗುವ ಮುನ್ನ ಒಂದು ಹಿಡಿ ಬಾದಾಮಿ ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆಯುವುದಲ್ಲದೆ, ನಿದ್ದೆಯ ಗುಣಮಟ್ಟವೂ ಸುಧಾರಿಸುತ್ತದೆ.
2. ವಾಲ್ ನಟ್ಸ್ (Walnuts)
ವಾಲ್ ನಟ್ಸ್ ನಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಮತ್ತು ‘ಮೆಲಟೋನಿನ್’ ಎಂಬ ಹಾರ್ಮೋನ್ ಇರುತ್ತದೆ. ಈ ಮೆಲಟೋನಿನ್ ನಮ್ಮ ದೇಹದ ನಿದ್ದೆ ಮತ್ತು ಎಚ್ಚರದ ಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ರಾತ್ರಿಯ ಊಟದ ನಂತರ ಸೀಮಿತ ಪ್ರಮಾಣದಲ್ಲಿ ಆಕ್ರೋಡು ಸೇವಿಸುವುದು ಒಳ್ಳೆಯದು.
3. ಕಿವಿ ಹಣ್ಣು
ಕಿವಿ ಹಣ್ಣು ವಿಟಮಿನ್ ಸಿ, ಫೋಲೇಟ್ ಮತ್ತು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ನಿಯಮಿತವಾಗಿ ಕಿವಿ ಹಣ್ಣನ್ನು ತಿನ್ನುವುದರಿಂದ ಬೇಗನೆ ನಿದ್ದೆ ಆವರಿಸಲು ಮತ್ತು ನಿದ್ದೆಯ ಅವಧಿಯನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ.
4. ಫ್ಯಾಟಿ ಫಿಶ್
ಸಾರ್ಡೀನ್, ಸಾಲ್ಮನ್ ಮತ್ತು ಮ್ಯಾಕೆರೆಲ್‌ನಂತಹ ಮೀನುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುತ್ತದೆ. ಇವು ಮೆದುಳಿನ ಕಾರ್ಯಕ್ಷಮತೆ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ರಾತ್ರಿ ನೆಮ್ಮದಿಯ ನಿದ್ದೆ ಬರುವಂತೆ ಮಾಡುತ್ತವೆ.
5. ಕ್ಯಾಮೊಮೈಲ್ ಟೀ
ಕ್ಯಾಮೊಮೈಲ್ ಟೀ ನೈಸರ್ಗಿಕವಾಗಿ ಕೆಫೀನ್ ಮುಕ್ತವಾಗಿರುವ ಒಂದು ಹರ್ಬಲ್ ಚಹಾ ಆಗಿದೆ. ರಾತ್ರಿ ಮಲಗುವ ಮುನ್ನ ಒಂದು ಕಪ್ ಬಿಸಿಬಿಸಿಯಾದ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಮನಸ್ಸು ಶಾಂತವಾಗುತ್ತದೆ, ದೇಹದ ಆಯಾಸ ದೂರವಾಗಿ ನಿರಾಳವಾದ ನಿದ್ದೆ ನಿಮ್ಮದಾಗುತ್ತದೆ.
ಗಮನಿಸಿ: ಉತ್ತಮ ನಿದ್ದೆಯು ಆರೋಗ್ಯಕರ ಜೀವನದ ರಹಸ್ಯವಾಗಿದೆ. ಇಂದಿನಿಂದಲೇ ನಿಮ್ಮ ಆಹಾರ ಶೈಲಿಯನ್ನು ಬದಲಾಯಿಸಿ, ಮಲಗುವ ಕನಿಷ್ಠ 1 ಗಂಟೆ ಮುಂಚಿತವಾಗಿ ಮೊಬೈಲ್ ಬಳಕೆಯನ್ನು ನಿಲ್ಲಿಸಿ.


















