ಸುದ್ದಿಒನ್, ದಾವಣಗೆರೆ, ಜುಲೈ. 06 : ಪ್ರೀತಿಸಿ ಮದುವೆಯಾಗಿದ್ದ ನವಜೋಡಿಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ತಮಗೆ ಜೀವಬೆದರಿಕೆ ಇದೆ ಎಂದು ರಕ್ಷಣೆ ಕೋರಿ ಬಂದಿದ್ದ ಯುವಕನ ಮೇಲೆ ಹುಡುಗಿಯ ಕಡೆಯವರು ಚಾಕುವಿನಿಂದ ಹಿಂಸಾತ್ಮಕವಾಗಿ ದಾಳಿ ನಡೆಸಿ, ಕೊಲೆಗೆ ಯತ್ನಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣದಲ್ಲಿ ಸಂಭವಿಸಿದೆ.
ಚನ್ನಗಿರಿ ತಾಲೂಕಿನ ದಾಗಿನಕಟ್ಟಿ ಗ್ರಾಮದ ಲೀಲಾವತಿ ಹಾಗೂ ಕಂಚುಗಾರನಹಳ್ಳಿಯ ಸಿದ್ದೇಶ್ ಪರಸ್ಪರ ಪ್ರೀತಿಸಿ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ಆದರೆ ಈ ಮದುವೆಗೆ ಹುಡುಗಿಯ ಕುಟುಂಬಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೆ, ನವಜೋಡಿಗೆ ನಿರಂತರವಾಗಿ ಜೀವಬೆದರಿಕೆ ಕರೆಗಳು ಬರುತ್ತಿದ್ದವು. ಇದರಿಂದ ಭಯಭೀತರಾದ ದಂಪತಿ ತಮ್ಮ ಪ್ರಾಣರಕ್ಷಣೆಗಾಗಿ ದಾವಣಗೆರೆಯ ಎಸ್‌ಪಿ ಕಚೇರಿಗೆ ತೆರಳಿ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ಎಸ್‌ಪಿ , ಸೂಕ್ತ ಕ್ರಮ ಮತ್ತು ತನಿಖೆಗಾಗಿ ಬಸವಾಪಟ್ಟಣ ಪೊಲೀಸ್ ಠಾಣೆಗೆ ತೆರಳುವಂತೆ ಜೋಡಿಗೆ ಸೂಚಿಸಿದ್ದರು.
ಎಸ್‌ಪಿ ಅವರ ಸೂಚನೆಯ ಮೇರೆಗೆ ಸಿದ್ದೇಶ್ ಮತ್ತು ಲೀಲಾವತಿ ದೂರು ದಾಖಲಿಸಲು ಬಸವಾಪಟ್ಟಣ ಪೊಲೀಸ್ ಠಾಣೆಯ ಆವರಣಕ್ಕೆ ಬಂದು ತಲುಪಿದ್ದರು. ಇದೇ ವೇಳೆ ಅಲ್ಲಿಗೆ ಹೊಂಚು ಹಾಕಿ ಬಂದಿದ್ದ ಹುಡುಗಿಯ ಸಂಬಂಧಿ ನಾಗರಾಜ ಹಾಗೂ ಆತನ ತಂಡ, ಸಿದ್ದೇಶ್ ಮೇಲೆ ಏಕಾಏಕಿ ಮುಗಿಬಿದ್ದಿದೆ. ಚಾಕುವಿನಿಂದ ಸಿದ್ದೇಶ್ ಮೇಲೆ ತೀವ್ರವಾಗಿ ಇರಿದು ಹತ್ಯೆಗೆ ಯತ್ನಿಸಿದ್ದಾರೆ.ಈ ಭೀಕರ ದಾಳಿಯಿಂದಾಗಿ ಸಿದ್ದೇಶ್ ಅವರ ಕೈ ಹಾಗೂ ದೇಹದ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ತಕ್ಷಣವೇ ದಾವಣಗೆರೆಯ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ತುರ್ತು ಶಸ್ತ್ರಚಿಕಿತ್ಸೆ ಮುಂದುವರಿದಿದೆ. ಭೀಕರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

















