ಬೆಂಗಳೂರು : ಬೆಂಗಳೂರಿನ ಬಿ ಖಾತಾ ಆಸ್ತಿದಾರರಿಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಮಹತ್ವದ ಸಿಹಿಸುದ್ದಿ ನೀಡಿದ್ದಾರೆ. ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡುವ ವೇಳೆ ವಿಧಿಸಲಾಗುತ್ತಿದ್ದ ಗೈಡ್‌ಲೈನ್ಸ್ ವ್ಯಾಲ್ಯೂ ಶುಲ್ಕವನ್ನು ಶೇ.5ರಿಂದ ಶೇ.2ಕ್ಕೆ ಇಳಿಕೆ ಮಾಡಲಾಗಿದೆ.
ಈ ನಿರ್ಧಾರದಿಂದ ಸಾವಿರಾರು ಆಸ್ತಿದಾರರಿಗೆ ಆರ್ಥಿಕ ಭಾರ ಕಡಿಮೆಯಾಗಲಿದ್ದು, ಬಿ ಖಾತಾ ಆಸ್ತಿಗಳನ್ನು ಕಾನೂನುಬದ್ಧ ಎ ಖಾತಾಗೆ ಪರಿವರ್ತಿಸಲು ಅನುಕೂಲವಾಗಲಿದೆ.
ಗೈಡ್‌ಲೈನ್ಸ್ ವ್ಯಾಲ್ಯೂ ಎಂದರೇನು?
ಗೈಡ್‌ಲೈನ್ಸ್ ವ್ಯಾಲ್ಯೂ (Guidance Value) ಎಂದರೆ ಆಸ್ತಿ ನೋಂದಣಿ ಹಾಗೂ ಮುದ್ರಾಂಕ ಶುಲ್ಕಕ್ಕಾಗಿ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಆಸ್ತಿ ಮೌಲ್ಯ. ಈ ಮೌಲ್ಯದ ಆಧಾರದ ಮೇಲೆ ಖಾತಾ ಪರಿವರ್ತನಾ ಶುಲ್ಕ ಲೆಕ್ಕ ಹಾಕಲಾಗುತ್ತದೆ.

ಹೊಸ ನಿಯಮದ ಪ್ರಕಾರ ಶುಲ್ಕ ಹೇಗೆ?
ಸರ್ಕಾರದ ಹೊಸ ನಿಯಮಾವಳಿಗಳ ಪ್ರಕಾರ, ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಆಸ್ತಿಯ ಒಟ್ಟು ಗೈಡ್‌ಲೈನ್ಸ್ ವ್ಯಾಲ್ಯೂ ಮೇಲೆ ಶೇ.2ರಷ್ಟು ಶುಲ್ಕ ಪಾವತಿಸಬೇಕು.
ಲೆಕ್ಕಾಚಾರ ಹೀಗಿದೆ :
ಆಸ್ತಿಯ ಒಟ್ಟು ವಿಸ್ತೀರ್ಣ × ಪ್ರತಿ ಚದರ ಅಡಿಗೆ ಸರ್ಕಾರ ನಿಗದಿಪಡಿಸಿದ ಗೈಡ್‌ಲೈನ್ಸ್ ಮೌಲ್ಯ = ಒಟ್ಟು ಆಸ್ತಿ ಮೌಲ್ಯ
ಪರಿವರ್ತನಾ ಶುಲ್ಕ = ಒಟ್ಟು ಆಸ್ತಿ ಮೌಲ್ಯ × 2%
ಉದಾಹರಣೆಗೆ, ಆಸ್ತಿಯ ಗೈಡ್‌ಲೈನ್ಸ್ ಮೌಲ್ಯ 50 ಲಕ್ಷ ರೂ. ಇದ್ದರೆ, ಅದರ ಶೇ.2ರಂತೆ 1 ಲಕ್ಷ ರೂ. ಪರಿವರ್ತನಾ ಶುಲ್ಕ ಪಾವತಿಸಬೇಕಾಗುತ್ತದೆ.
ಇತರೆ ಶುಲ್ಕಗಳೂ ಅನ್ವಯ
ಪರಿವರ್ತನಾ ಶುಲ್ಕದ ಜೊತೆಗೆ ಆನ್‌ಲೈನ್ ಅರ್ಜಿ ಶುಲ್ಕ, ಬೆಟರ್‌ಮೆಂಟ್ ಚಾರ್ಜಸ್ ಹಾಗೂ ಇತರೆ ಸರ್ಕಾರಿ ಶುಲ್ಕಗಳು ಕೂಡ ಅನ್ವಯವಾಗುತ್ತವೆ.
ಅರ್ಹ ಆಸ್ತಿಗಳನ್ನು ಬಿ ಖಾತಾದಿಂದ ಎ ಖಾತಾಗೆ ಬದಲಾಯಿಸಲು Kaveri Karnataka Portal ಸೇರಿದಂತೆ ಸಂಬಂಧಿತ ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದು.

ಎ ಖಾತಾ ಮತ್ತು ಬಿ ಖಾತಾ ನಡುವಿನ ವ್ಯತ್ಯಾಸ
ಎ ಖಾತಾ (A Khata):
ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿರುವ, ತೆರಿಗೆ ಪಾವತಿ ಪೂರ್ಣಗೊಂಡಿರುವ ಕಾನೂನುಬದ್ಧ ಆಸ್ತಿಗೆ ನೀಡುವ ಮಾನ್ಯ ದಾಖಲೆ.
ಬಿ ಖಾತಾ (B Khata):
ತೆರಿಗೆ ಪಾವತಿಗಾಗಿ ನೀಡಲಾಗುವ ತಾತ್ಕಾಲಿಕ ದಾಖಲೆ. ದಾಖಲೆಗಳ ಕೊರತೆ, ನಿಯಮ ಉಲ್ಲಂಘನೆ ಅಥವಾ ಅನಧಿಕೃತ ಬಡಾವಣೆಗಳ ಸಮಸ್ಯೆ ಇರುವ ಆಸ್ತಿಗಳು ಸಾಮಾನ್ಯವಾಗಿ ಬಿ ಖಾತಾ ವ್ಯಾಪ್ತಿಗೆ ಬರುತ್ತವೆ.








