ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.30 : ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸುದೀರ್ಘ ಹಾಗೂ ಅಪಾರ ಸೇವೆಯನ್ನು ಗುರುತಿಸಿ, ಹಿರಿಯ ಪತ್ರಕರ್ತರಾದ ಡಿ. ಉಮಾಪತಿ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಲಭಿಸಿದೆ.
ಚಿತ್ರದುರ್ಗದ ಡಿ. ಉಮಾಪತಿ ಅವರು ದಿವಂಗತ ಕೆ. ದಾಸಪ್ಪ ಹಾಗೂ ದಿವಂಗತ ಹನುಮಮ್ಮ ದಂಪತಿಯ ಪುತ್ರ. ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಇವರು, ಪತ್ರಿಕೋದ್ಯಮದತ್ತ ಆಕರ್ಷಿತರಾದರು.
ಖ್ಯಾತ ಪತ್ರಕರ್ತ ಖಾದ್ರಿ ಶ್ಯಾಮಣ್ಣನವರ ಮಾರ್ಗದರ್ಶನದಲ್ಲಿ ‘ಕನ್ನಡ ಪ್ರಭ’ ಪತ್ರಿಕೆಯ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಉಮಾಪತಿ ಅವರು, ಅತ್ಯುತ್ತಮ ವರದಿಗಾರಿಕೆ ಹಾಗೂ ಅಂಕಣ ಬರಹಗಳ ಮೂಲಕ ಗುರುತಿಸಿಕೊಂಡರು. ತದನಂತರ ‘ವಿಜಯ ಕರ್ನಾಟಕ’ ಹಾಗೂ ‘ಪ್ರಜಾವಾಣಿ’ ಪತ್ರಿಕೆಗಳಲ್ಲಿ ಹಲವು ದಶಕಗಳ ಕಾಲ ದೆಹಲಿ ಮೂಲದ ವಿಶೇಷ ಪ್ರತಿನಿಧಿಯಾಗಿ, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಕುರಿತು ಪ್ರಭಾವಿ ವಿಶ್ಲೇಷಣೆಗಳನ್ನು ನೀಡಿದ್ದಾರೆ. ಪ್ರಸ್ತುತ ಇವರು ‘ಈ ದಿನ.ಕಾಮ್’ ಜಾಲತಾಣದ ಗೌರವ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.











