ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 30 : ನಗರದ ಗೋಪಾಲಪುರ ರಸ್ತೆ ವಾಟರ್ ಟ್ಯಾಂಕ್ ಹತ್ತಿರದ ಮನೆಯೊಂದರಲ್ಲಿ ಸೆಪ್ಟೆಂಬರ್ 03 ರಂದು ಮನೆಯ ಬೀಗ ಮುರಿದು ಬೀರುವಿನಲ್ಲಿದ್ದ ಸುಮಾರು 10,000/- ರೂ ನಗದು ಹಣವನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಚಿತ್ರದುರ್ಗ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಬಂಧಿತನನ್ನು ಶಿವಮೊಗ್ಗ ಮೂಲದ ಗೌತಮ್ ರಾಜ ಎಂದು ಗುರುತಿಸಲಾಗಿದೆ. ಬಂಧಿತನಿಂದ 27 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 5800/- ರೂ ನಗದು ಹಣ ಸೇರಿದಂತೆ ಒಟ್ಟು 3,30,800/- ರೂ ಮೌಲ್ಯದ ಬಂಗಾರ ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಸೆಪ್ಟೆಂಬರ್ 03 ರಂದು ನಗರದ ಗೋಪಾಲಪುರ ರಸ್ತೆ ವಾಟರ್ ಟ್ಯಾಂಕ್ ಹತ್ತಿರದ ಮನೆಯೊಂದರಲ್ಲಿ ಸುಮಾರು 10,000/- ರೂ ನಗದು ಹಣವನ್ನು ಕಳ್ಳತನ ಮಾಡಿರುತ್ತಾನೆ.
ಈ ಸಂಬಂಧ ಚಿತ್ರದುರ್ಗ ನಗರ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಲ್ ಚೌಕ್ಷೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಶಿವಕುಮಾರ್ ಆರ್.,
ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ಹಾಗೂ ನಿರಂಜನ್. ಬಿ. ಪೊಲೀಸ್ ನಿರೀಕ್ಷಕರು. ನಗರ ಪೊಲೀಸ್ ಠಾಣೆ. ಚಿತ್ರದುರ್ಗ. ಹಾಗೂ ವಿಶ್ವನಾಥ್. ಕೆ.ಎನ್. ಪೊಲೀಸ್ ನಿರೀಕ್ಷಕರು, ಬೆರಳು ಮುದ್ರೆ ಘಟಕ ಚಿತ್ರದುರ್ಗ ರವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ನಾರಾಯಣ ರೆಡ್ಡಿ, ಎ.ಎಸ್.ಐ. ಸಿದ್ದಲಿಂಗಯ್ಯ ಹಿರೇಮಠ, ಎ.ಎಸ್.ಐ. ಹಾಗೂ ಹಿದಾಯತ್ ಸಿ. ಸಿ. ಅಂಜಿನಪ್ಪ, ಸಿ ಉಮೇಶ್, ರಮೇಶ್ ಬಾರ್ಕಿ, ಹಾಗೂ ಬೆರಳು ಮುದ್ರೆ ಘಟಕದ ಸಿಬ್ಬಂದಿಯವರಾದ ಅನಿಲ್ ಕುಮಾರ್, ಚೇತನ್, ಮಂಜುನಾಥ. ಮತ್ತು ಗಣಕಯಂತ್ರದ ವಿಭಾಗ ಜಿಲ್ಲಾ ಪೊಲೀಸ್ ಕಛೇರಿ ಸಿಬ್ಬಂದಿ ಸತೀಶ್.ಆರ್. ಪ್ರಕಾಶ್, ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಖಚಿತವಾದ ಮಾಹಿತಿ ಮೇರೆಗೆ ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಚಿತ್ರದುರ್ಗ ನಗರದ ಗೋಪಾಲಪುರ ರಸ್ತೆ ಹಾಗೂ ಆಜಾದ್ ನಗರದಲ್ಲಿ ಮನೆಯಲ್ಲಿ ಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ.
ಬಂಧಿತ ಆರೋಪಿಯನ್ನು ಅಕ್ಟೋಬರ್ 29 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಷೆ ಶ್ಲಾಘಿಸಿದ್ದಾರೆ.












