ಧರ್ಮಸ್ಥಳದಲ್ಲಿ ನಡೆದಿತ್ತೆನ್ನಲಾದ ಅನುಮಾನಾಸ್ಪದ ಸಾವುಗಳು ಮತ್ತು ಹತ್ಯೆಗಳ ಆರೋಪದ ಪ್ರಕರಣದಲ್ಲಿ ತನ್ನ ಹೆಸರನ್ನು ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದು, ಈ ಕುರಿತು ಸ್ಪಷ್ಟನೆ ನೀಡಲು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸುವುದಾಗಿ ಘೋಷಿಸಿದ್ದಾರೆ.ಧರ್ಮಸ್ಥಳದಲ್ಲಿ ಹಲವು ಮಹಿಳೆಯರ ಮೃತದೇಹಗಳನ್ನು ತಾನೇ ಹೂತಿದ್ದಾಗಿ ಈ ಹಿಂದೆ ಹೇಳಿಕೊಂಡಿದ್ದ ಮಾಜಿ ಸ್ವಚ್ಛತಾ ಕಾರ್ಮಿಕ ಚಿನ್ನಯ್ಯ, ನಂತರ ತನ್ನ ಹೇಳಿಕೆಯಿಂದ ಹಿಂದೆ ಸರಿದಿದ್ದರು. ತನ್ನನ್ನು ಕೆಲ ವ್ಯಕ್ತಿಗಳು ಪ್ರೇರೇಪಿಸಿದ್ದು, ಅವರ ಸೂಚನೆಯಂತೆ ತಾನು ವರ್ತಿಸಿದ್ದಾಗಿ ಚಿನ್ನಯ್ಯ ಹೊಸ ಹೇಳಿಕೆ ನೀಡಿದ್ದರು.
ಇತ್ತೀಚೆಗೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಶೀಘ್ರವಾಗಿ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದ್ದ ಚಿನ್ನಯ್ಯ, ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಕೆಲವರ ವಿರುದ್ಧ ತಾನು ನೀಡಿದ್ದ ದೂರನ್ನೂ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದರು. ಇದೇ ವೇಳೆ ನಟ ಪ್ರಕಾಶ್ ರಾಜ್ ಅವರ ಹೆಸರನ್ನೂ ಉಲ್ಲೇಖಿಸಿ ಹೊಸ ವಿವಾದ ಸೃಷ್ಟಿಸಿದ್ದರು.ಚಿನ್ನಯ್ಯ ಆರೋಪದ ಪ್ರಕಾರ, ಗಿರೀಶ್ ಮಟ್ಟಣ್ಣವರ್ ಮೂಲಕ ಪ್ರಕಾಶ್ ರಾಜ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆದಿತ್ತು ಎಂದು ಹೇಳಿಕೊಂಡಿದ್ದರು. ಅಲ್ಲದೆ ಈ ಬೆಳವಣಿಗೆಗಳ ಹಿಂದೆ ದೊಡ್ಡ ಮಟ್ಟದ ಹಣಕಾಸಿನ ವ್ಯವಸ್ಥೆಯೂ ಇದೆ ಎಂಬ ಆರೋಪವನ್ನೂ ಮಾಡಿದ್ದರು.
ಈ ಆರೋಪಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ನಟ ಪ್ರಕಾಶ್ ರಾಜ್ ಈ ಹಿಂದೆ ಇವೆಲ್ಲವೂ ಊಹಾಪೋಹಗಳು ಎಂದು ಸ್ಪಷ್ಟಪಡಿಸಿದ್ದರು. ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಪ್ರತಿಕ್ರಿಯಿಸಿರುವ ಅವರು, ಮಾಧ್ಯಮ ಪ್ರತಿನಿಧಿಗಳನ್ನು ಪತ್ರಿಕಾಗೋಷ್ಠಿಗೆ ಆಹ್ವಾನಿಸಿದ್ದಾರೆ.
“ನಮಸ್ಕಾರ ಮಾಧ್ಯಮ ಮಿತ್ರರೇ… ಧರ್ಮಸ್ಥಳ ಪ್ರಕರಣ ಹಾಗೂ ನನ್ನ ಕುರಿತಾಗಿ ಚಿನ್ನಯ್ಯ ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಕೆಲವು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ. ಜೂನ್ 17ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭೇಟಿಯಾಗೋಣ” ಎಂದು ಅವರು ಪೋಸ್ಟ್ ಮಾಡಿದ್ದಾರೆ.ಪ್ರಕಾಶ್ ರಾಜ್ ಅವರ ಈ ಘೋಷಣೆಯಿಂದ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ವಿವಾದ ಮತ್ತಷ್ಟು ಕುತೂಹಲ ಕೆರಳಿಸಿದ್ದು, ಪತ್ರಿಕಾಗೋಷ್ಠಿಯಲ್ಲಿ ಅವರು ಯಾವ ಮಾಹಿತಿಯನ್ನು ಬಹಿರಂಗಪಡಿಸಲಿದ್ದಾರೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.










