ಬೆಂಗಳೂರು : ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮಡ ನೀಡುವುದಕ್ಕೆ ಎಂಎಲ್ಸಿ ನಜೀರ್ ಅಹ್ಮದ್ ಅವರಿಗೆ ಡೆಡ್ಲೈನ್ ನಿಗದಿ ಮಾಡಲಾಗಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಈ ಡೆಡ್ಲೈನ್ ನೀಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಇಂದು ಸಂಜೆಯೊಳಗೆ ರಾಜೀನಾಮೆ ನೀಡಬೇಕೆಂದು ಸೂಚನೆ ನೀಡಿದ್ದಾರೆ.
ಒಂದು ವೇಳೆ ಸಂಜೆ ವೇಳೆಗೆ ನಜೀರ್ ಅಹ್ಮದ್ ರಾಜೀನಾಮೆ ಕೊಡದೆ ಹೋದರೆ ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ನಿನ್ನೆಯೇ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ನನ್ನ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಅವರು ಇದುವರೆಗೂ ರಾಜೀನಾಮೆ ನೀಡಿಲ್ಲ. ಮುಂದೆ ನೀಡಬಹುದೇನೋ. ಕಾಂಗ್ರೆಸ್ ಪಕ್ಷ ಸೋಲನ್ನು ಒಪ್ಪಿಕೊಂಡಿಲ್ಲ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಖಂಡಿತ. ತಲೆದಂಡಕ್ಕೆ ಚುನಾವಣೆಯ ಸೋಲು ಗೆಲುವು ಕಾರಣವಲ್ಲ.

ನಜೀರ್ ಅಹ್ಮದ್ ಅವರು ಪಕ್ಷದ ಮುಖಂಡರು. ಅವರು ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕೆಲವರ ಪಕ್ಷ ವಿರೋಧಿ ಕಾರ್ಯಗಳ ಬಗ್ಗೆ ಹೇಳಿಕೆ ನೀಡಿ ಅಸಮಾ್ದಾನ ವ್ಯಕ್ತಪಡಿಸಿದ್ದಾರೆಯೇ ಹೊರತು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಜಿತವಾಗಲಿದೆ ಎಂದು ಅವರು ಹೇಳಿರುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆಗಳ ನಡುವೆಯೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದಿದ್ದಾರೆ. ಈಗಾಗಲೇ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬರ್ ರಾಜೀನಾಮೆಯನ್ನು ಕೊಟ್ಟಿದ್ದಾರೆ. ಆ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಂಗೀಕಾರವನ್ನು ಮಾಡಿದ್ದಾರೆ. ಇದೀಗ ನಜೀರ್ ಅಹ್ಮದ್ ಅವರಿಗೆ ಡೆಡ್ ಲೈನ್ ನೀಡಲಾಗಿದೆ.












