ಬೆಂಗಳೂರು: ದಾವಣಗೆರೆ ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆಯಾಗಿರುವ ದೇವರಬೆಳಕೆರೆ ಹಾಗೂ ಭೈರನಪಾದ ಏತ ನೀರಾವರಿ ಯೋಜನೆಗಳಿಗೆ ತಕ್ಷಣವೇ ಆಡಳಿತಾತ್ಮಕ ಅನುಮೋದನೆ ಮತ್ತು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಕೋರಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ನೇತೃತ್ವದ ರೈತರ ನಿಯೋಗವು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಹರಿಹರ ತಾಲೂಕಿನ ದೇವರಬೆಳಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಸುಮಾರು ₹75.00 ಕೋಟಿ ಅಂದಾಜು ವೆಚ್ಚದ ಯೋಜನೆ ಇದಾಗಿದ್ದು, ಇದು ಸಾಕಾರಗೊಂಡರೆ ಆ ಭಾಗದ ಸಾವಿರಾರು ರೈತರ ಜಮೀನುಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ದೊರೆಯಲಿದೆ.
ಅದೇ ರೀತಿ, ಭದ್ರಾ ಅಚ್ಚುಕಟ್ಟು ಬಾಧಿತ ಪ್ರದೇಶಗಳಿಗೆ ನೀರಾವರಿ ಒದಗಿಸುವ ಸುಮಾರು ₹136.00 ಕೋಟಿ ಅಂದಾಜು ವೆಚ್ಚದ ‘ಭೈರನಪಾದ ಏತ ನೀರಾವರಿ ಯೋಜನೆ’ಗೆ ಚಾಲನೆ ನೀಡುವಂತೆ ಕೋರಲಾಯಿತು. ಈ ಯೋಜನೆಯಡಿ ತುಂಗಭದ್ರಾ ನದಿಯಿಂದ ನೀರೆತ್ತಿ ಸುಮಾರು 1,632 ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುವುದು ಮತ್ತು ಸುತ್ತಮುತ್ತಲಿನ 6 ಪ್ರಮುಖ ಕೆರೆಗಳನ್ನು ತುಂಬಿಸುವ ಮಹತ್ವದ ಗುರಿ ಹೊಂದಲಾಗಿದೆ.

ಈ ಎರಡೂ ಪ್ರಮುಖ ನೀರಾವರಿ ಯೋಜನೆಗಳಿಗೆ ಶೀಘ್ರವಾಗಿ ಮಂಜೂರಾತಿ ನೀಡಿ, ಅನುದಾನ ಬಿಡುಗಡೆ ಮಾಡಬೇಕು ಹಾಗೂ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳಲು ‘ಕರ್ನಾಟಕ ನೀರಾವರಿ ನಿಗಮ ನಿಯಮಿತ’ಕ್ಕೆ (KNNL) ಸೂಕ್ತ ನಿರ್ದೇಶನ ನೀಡಬೇಕೆಂದು ನಿಯೋಗವು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ವಿನಂತಿಸಿತು.









