ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಬಳಕೆಯಿಂದ ಸಂಭವಿಸಬಹುದಾದ ಅವಘಡಗಳನ್ನು ತಡೆಗಟ್ಟಲು ಹಾಗೂ ಮಕ್ಕಳ ಆರೋಗ್ಯ ಮತ್ತು ಪರಿಸರ ರಕ್ಷಣೆ ಮಾಡುವ ಉದ್ದೇಶದಿಂದ ರಾಜ್ಯದ ಎಲ್ಲಾ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಪಟಾಕಿ ಸಿಡಿಸುವ ವೇಳೆ ಎಚ್ಚರ ತಪ್ಪಿದರೆ ಕಣ್ಣು, ಮುಖ ಹಾಗೂ ದೇಹದ ಇತರೆ ಭಾಗಗಳಿಗೆ ಗಾಯವಾಗುವ ಮತ್ತು ದೃಷ್ಟಿಹೀನತೆಯಂತಹ ಗಂಭೀರ ಅಪಾಯಗಳು ಎದುರಾಗುತ್ತವೆ. ಜೊತೆಗೆ, ಪಟಾಕಿ ಹೊಗೆಯಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟಾಗಿ ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯ ಪೀಡಿತರ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಲು ಸರ್ಕಾರ ಸೂಚಿಸಿದೆ.
ಶಾಲಾ-ಕಾಲೇಜುಗಳಿಗೆ ನೀಡಲಾದ ಪ್ರಮುಖ ನಿರ್ದೇಶನಗಳು:
ಪ್ರಾರ್ಥನಾ ಅವಧಿಯಲ್ಲಿ ಹಾಗೂ ಪ್ರತ್ಯೇಕ ಅವಧಿಗಳಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷಿತ ದೀಪಾವಳಿ ಆಚರಣೆಯ ಕುರಿತು ಜಾಗೃತಿ ಮೂಡಿಸುವುದು.
ಪಟಾಕಿಗಳ ಬದಲಿಗೆ ಹಣತೆ ಹಚ್ಚುವುದು ಮತ್ತು ಪರಿಸರ ಸ್ನೇಹಿ ಅಲಂಕಾರಗಳ ಮೂಲಕ ಹಬ್ಬ ಆಚರಿಸಲು ಉತ್ತೇಜಿಸುವುದು.
ಶಾಲಾ-ಕಾಲೇಜುಗಳ ಸೂಚನಾ ಫಲಕಗಳಲ್ಲಿ ಸುರಕ್ಷತಾ ಸಂದೇಶಗಳನ್ನು ಪ್ರದರ್ಶಿಸುವುದು.
ಶಾಲಾ ವಾಟ್ಸಾಪ್ ಗುಂಪುಗಳ (WhatsApp Groups) ಮೂಲಕ ಪೋಷಕರಿಗೆ ಸುರಕ್ಷತಾ ಸಲಹೆಗಳು ಮತ್ತು ಸಂದೇಶಗಳನ್ನು ರವಾನಿಸುವುದು.
SDMC/CDC ಸಹಕಾರದೊಂದಿಗೆ ವಿದ್ಯಾರ್ಥಿಗಳಿಂದ ಸುರಕ್ಷತಾ ಪ್ರತಿಜ್ಞೆ ಮಾಡಿಸುವುದು ಹಾಗೂ ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿವಳಿಕೆ ನೀಡುವುದು.
ವಿದ್ಯಾರ್ಥಿಗಳು ಮತ್ತು ಪೋಷಕರು ಪಾಲಿಸಬೇಕಾದ ಸುರಕ್ಷತಾ ಕ್ರಮಗಳು
ದೊಡ್ಡವರ ಉಪಸ್ಥಿತಿ ಕಡ್ಡಾಯ: ಮಕ್ಕಳು ಯಾವುದೇ ಕಾರಣಕ್ಕೂ ಪೋಷಕರು ಅಥವಾ ವಯಸ್ಕರ ನೇರ ಮೇಲ್ವಿಚಾರಣೆಯಿಲ್ಲದೆ ಪಟಾಕಿ ಸಿಡಿಸಬಾರದು.
ಸುರಕ್ಷಿತ ಸ್ಥಳದ ಆಯ್ಕೆ: ಮನೆಯ ಒಳಭಾಗ, ವಾಹನ ನಿಲುಗಡೆ ಸ್ಥಳ, ಕಿರಿದಾದ ರಸ್ತೆಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಹಚ್ಚಬಾರದು.
ಬಟ್ಟೆಗಳ ಆಯ್ಕೆ: ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ನೈಲಾನ್ ಬಟ್ಟೆಗಳನ್ನು ಧರಿಸದೆ, ಸುರಕ್ಷಿತವಾದ ಹತ್ತಿ (ಕಾಟನ್) ಬಟ್ಟೆಗಳನ್ನು ಧರಿಸಬೇಕು.
ಅಪಾಯಕಾರಿ ಪ್ರಯೋಗ ಸಲ್ಲದು: ಕೈಯಲ್ಲಿ ಹಿಡಿದು ಪಟಾಕಿ ಸಿಡಿಸುವುದು, ಬಾಟಲಿ, ಡಬ್ಬಿ ಅಥವಾ ಮುಚ್ಚಿದ ಪಾತ್ರೆಗಳೊಳಗೆ ಇಟ್ಟು ಹಚ್ಚುವುದು ಸಂಪೂರ್ಣ ನಿಷಿದ್ಧ. ಸಿಡಿಯದೆ ಉಳಿದ ಪಟಾಕಿಗಳನ್ನು ಮರುಹಚ್ಚಲು ಪ್ರಯತ್ನಿಸಬಾರದು.
ತುರ್ತು ಮುನ್ನೆಚ್ಚರಿಕೆ: ಪಟಾಕಿ ಹಚ್ಚುವ ಸ್ಥಳದಲ್ಲಿ ಬಕೆಟ್ನಲ್ಲಿ ನೀರು ಅಥವಾ ಮರಳಿನ ವ್ಯವಸ್ಥೆ ಇಟ್ಟುಕೊಳ್ಳಬೇಕು.
ತುರ್ತು ಸಹಾಯವಾಣಿ ಸಂಖ್ಯೆಗಳು
ಅವಘಡಗಳು ಸಂಭವಿಸಿದ ತಕ್ಷಣ ತುರ್ತು ನೆರವಿಗಾಗಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಲು ತಿಳಿಸಲಾಗಿದೆ:
ಪೊಲೀಸ್ ತುರ್ತು ಸೇವೆ: 112
ಅಗ್ನಿಶಾಮಕ ದಳ: 101
ಆಂಬ್ಯುಲೆನ್ಸ್ ಸೇವೆ: 108
“ಮಕ್ಕಳ ಸುರಕ್ಷತೆಯೇ ಮೊದಲ ಆದ್ಯತೆ – ಅಪಘಾತ ಮುಕ್ತ ದೀಪಾವಳಿಯೇ ನಮ್ಮ ಸಂಕಲ್ಪ” ಎಂಬ ಧ್ಯೇಯದೊಂದಿಗೆ ಎಲ್ಲರೂ ಜವಾಬ್ದಾರಿಯುತವಾಗಿ ಹಬ್ಬ ಆಚರಿಸಲು ಇಲಾಖೆ ಕರೆ ನೀಡಿದೆ.















