ಇಂದು ಕನ್ನಡದ ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ನಟ ದರ್ಶನ್ ಅವರ ಹುಟ್ಟು ಹಬ್ಬ. ಈ ದಿನಕ್ಕಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರು. ಪ್ರತಿ ವರ್ಷ ದರ್ಶನ್ ಅವರು ತಮ್ಮ ಮನೆಯ ಬಳಿ ಟೈಟ್ ಸೆಕ್ಯೂರಿಟಿ ವ್ಯವಸ್ಥೆ ಮಾಡಿ, ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದರು. ಆದರೆ ಈ ವರ್ಷ ಬೆನ್ನು ನೋವು ಇದೆ ಜೊತೆಗೆ ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆಯ ಕೆಟ್ಟ ಘಟನೆಯಿಂದ ಹೊರ ಬರಬೇಕಿದೆ. ಹೀಗಾಗಿ ಈ ವರ್ಷ ಅಭಿಮಾನಿಗಳಿಗೂ ಕೈ ಮುಗಿದು ಕೇಳಿಕೊಂಡಿದ್ದರು. ಈ ವರ್ಷ ಕ್ಷಮಿಸಿಬಿಡಿ ಎಂದು.
ಇಂದು ಅಭಿಮಾನಿಗಳು ಮಾತ್ರ ಹುಟ್ಟುಹಬ್ಬವನ್ನು ಆಚರಿಸೋದನ್ನ ನಿಲ್ಲಿಸಿಲ್ಲ. ಬ್ಯಾನರ್ ಕಟ್ಟಿ, ಅನ್ನದಾನ ಮಾಡಿ, ಸಮಾಜ ಸೇವೆಗೆ ಮುಂದಾಗಿದ್ದಾರೆ. ಇದ್ದಲ್ಲಿಯೇ ತಮ್ಮ ಬಾಸ್ ಬರ್ತ್ ಡೇ ಆಚರಿಸುತ್ತಿದ್ದಾರೆ. ಈ ಬಾರಿಯ ದರ್ಶನ್ ಬರ್ತ್ ಡೇಗೆ ವಿಶೇಷ ಏನಂದ್ರೆ ಸಿಕ್ಕಾಪಟ್ಟೆ ಹಾಡುಗಳು ಅವರ ಮೇಲೆ ಹುಟ್ಟಿಕೊಂಡಿವೆ. ಸುಮಾರು ಜನ ಕಲಾವಿದ ಅಭಿಮಾನಿಗಳು ದರ್ಶನ್ ಗೆ ಧೈರ್ಯ ತುಂಬುವಂತಹ ಪದಗಳನ್ನು ಬರೆದು, ಹಾಡು ಕಟ್ಟಿ ಹಾಡಿದ್ದಾರೆ. ಕಳೆದ ಒಂದು ವಾರದಿಂದಾನೇ ಈ ಹಾಡುಗಳು ಹಿಟ್ ಆಗಿವೆ. ಇದೀಗ ಬಹು ನಿರೀಕ್ಷಿತ ಡೆವಿಲ್ ಸಿನಿಮಾ ಅಪ್ಡೇಟ್ ಕೂಡ ಹೊರ ಬಿದ್ದಿದೆ.
ಡೆವಿಲ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ದರ್ಶನ್ ಡೆವಿಲ್ ಅವತಾರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಭರ್ಜರಿ ಆಕ್ಷನ್ ಎಂಟರ್ಟೈನ್ಮೆಂಟ್ ಕಾಣಿಸುತ್ತಿದೆ. ಖಡಕ್ ಡೈಲಾಗ್ ಹೇಳುವ ಮೂಲಕ, ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ. ಡೆವಿಲ್ ನಲ್ಲಿ ದರ್ಶನ್ ಅವರ ಉಗ್ರರೂಪ ಕಂಡು ದರ್ಶನ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
















