ಸುದ್ದಿಒನ್, ಹೊಸದುರ್ಗ, ಮಾರ್ಚ್. 30 : ಮಧ್ಯ ಕರ್ನಾಟಕದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನನ್ನನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದಾರೆ. ಚಿತ್ರದುರ್ಗ ಕ್ಷೇತ್ರ ಅಭಿವೃದ್ಧಿ ವಂಚಿತವಾಗಿದ್ದು, ಅಕ್ಕ ಪಕ್ಕದ ದಾವಣಗೆರೆ, ಶಿವಮೊಗ್ಗ, ಹಾಸನ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳು ಸಾಕಷ್ಟು ಅಭಿವೃದ್ಧಿ ಹೊಂದಿವೆ. ಆದರೆ, ಚಿತ್ರದುರ್ಗ ಮಾತ್ರ ಅಭಿವೃದ್ಧಿ ಹೊಂದದೇ ಹಿಂದುಳಿದಿದೆ. ಈ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ನನ್ನ ಗುರಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದಲ್ಲಿ ಶನಿವಾರ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆ ಅತ್ಯಂತ ಶ್ರೇಷ್ಠ ರಾಜಕಾರಣಿ ದಿವಂಗತ ಎಸ್.ನಿಜಲಿಂಗಪ್ಪನವರ ಜನ್ಮಭೂಮಿ ಮತ್ತು ಕರ್ಮ ಭೂಮಿಯಾಗಿದೆ. ಅವರು ಮುಖ್ಯಮಂತ್ರಿ ಆದಾಗಿನಿಂದಲೂ, ಅವರಿಗೆ ಅನೇಕ ಸ್ಥಾನಮಾನಗಳು ದೊರೆತಿದ್ದರೂ ಕೂಡ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ.
ಭಾರತ ದೇಶ ಹಳ್ಳಿಗಳಿಂದ ತುಂಬಿರುವ ದೇಶವಾಗಿದ್ದು, ಇಲ್ಲಿ ಒಕ್ಕಲುತನವೇ ಪ್ರಧಾನವಾಗಿದೆ. ಇಲ್ಲಿನ ರೈತರಿಗೆ ಅನುಕೂಲವಾಗಬೇಕಾದರೆ, ನೀರಾವರಿ ಆಗಬೇಕು. ಗ್ರಾಮೀಣ ಪ್ರದೇಶ ಮತ್ತು ಬಡವರ ಮಕ್ಕಳಿಗೆ ಮತ್ತಷ್ಟು ಶಿಕ್ಷಣ ಕೊಡುವ ವ್ಯವಸ್ಥೆ ಆಗಬೇಕು. ಸ್ಥಳೀಯವಾಗಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕೆಂಬ ಸದುದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿರುವೆ. ಚುನಾವಣೆಯಲ್ಲಿ ಗೆಲುವು ಪಡೆದ ನಂತರ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ತಜ್ಞರನ್ನ ಕರೆದು ಯಾವ ರೀತಿಯಾಗಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ, ಕೆಲಸ ಮಾಡುವೆ ಎಂದರು.
ಸಿದ್ದರಾಮಯ್ಯನವರಿಗೆ ಗರ್ವದಿಂದ ಮಾತನಾಡುವುದನ್ನು ಬಿಟ್ಟರೆ, ಏನು ಗೊತ್ತಿಲ್ಲ. ಮೊದಲು ಅವರ ಗರ್ವಭಂಗವಾಗಬೇಕು. ರಾಜ್ಯದಲ್ಲಿ ನೀರಾವರಿಗೆ ಬಹಳ ಪ್ರಾಮಾಣಿಕವಾಗಿ ಒತ್ತು ನೀಡಿದ್ದರೆ, ಕೃಷ್ಣ ಮತ್ತು ಕಾವೇರಿ ನದಿಗೆ ಒತ್ತುಕೊಟ್ಟಿದ್ದರೆ, ಅದು ಮಾಜಿ ಪ್ರಧಾನಿ ದೇವೇಗೌಡರು. ಅವರ ಕೈಯಿಂದಲೇ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿವೆ. ಕಾಂಗ್ರೆಸ್ ನವರು ಆಗ ಅವರ ಮೇಲೆ ಆರೋಪ ಮಾಡಿದರು. ಕಾಂಗ್ರೆಸ್ ಪಕ್ಷದವರಿಗೆ ಆರೋಪ ಮಾಡುವುದನ್ನು ಬಿಟ್ಟರೆ, ಏನು ಗೊತ್ತಿಲ್ಲ ಎಂದು ಕಿಡಿಕಾರಿದರು.
ಹೊಳಲ್ಕೆರೆಯ ಬಿಜೆಪಿ ಶಾಸಕ ಎಂ.ಚಂದ್ರಪ್ಪ ನಿಮ್ಮ ಸ್ಪರ್ಧೆಗೆ ಅಪಸ್ವರ ತೆಗೆಯುತ್ತಿದ್ದು, ಇದನ್ನು ಯಾವ ರೀತಿಯಾಗಿ ಸರಿಪಡಿಸಿಕೊಳ್ಳುವಿರಿ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಹೈಕಮಾಂಡ್ ಗಮನಿಸುತ್ತಿದೆ. ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಠರು ನೀರು ಕುಡಿದಷ್ಟು ಸುಲಭವಾಗಿ ಸಮಸ್ಯೆಯನ್ನು ಬಗೆಹರಿಸುತ್ತಾರೆ. ನನಗೆ ಯಾವುದೇ ಸಮಸ್ಯೆ ಆಗಲಾರದು. ಚುನಾವಣೆಯಲ್ಲಿ ಗೆದ್ದು, ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುವೆ ಎಂದು ಹೇಳಿದರು.
ಈ ವೇಳೆ ಬಿಜೆಪಿ ಪಕ್ಷದ ಮುಖಂಡರಾದ ರಾಜ್ಯ ಖನಿಜ ನಿಗಮ ಮಾಜಿ ಅಧ್ಯಕ್ಷ ಎಸ್ ಲಿಂಗಾಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಗೂಳಿಹಟ್ಟಿ,, ಜೆಡಿಎಸ್ ಅಧ್ಯಕ್ಷ ಗಣೇಶ್, ಗುರುಸ್ವಾಮಿ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಲಕ್ಷ್ಮಣ್, ತಮ್ಮಣ್ಣ, ಜಗದೀಶ್ ರಾಮಯ್ಯ, ಶಿವು ಮಠ ಹಾಗೂ ನೂರಾರು ಕಾರ್ಯಕರ್ತರಿದ್ದರು.