ಬೆಂಗಳೂರು.ಜುಲೈ.20: ರಾಜ್ಯದಲ್ಲಿ ತಲೆದೋರಿರುವ ಮಳೆ ಕೊರತೆ, ಬರಗಾಲದ ಭೀತಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಡಿಸಿ ಮತ್ತು ಜಿಪಂ ಸಿಇಒ ಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದರು.
ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿ ಉದ್ಭವಿಸಿರುವ ಕುರಿತು ಮುಖ್ಯಮಂತ್ರಿಗಳ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಡಿಸಿ ಮತ್ತು ಜಿಪಂ ಸಿಇಒ ಗಳೊಂದಿಗೆ ವರ್ಚುವಲ್ ಮೂಲಕ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಶೇ. 60 ರಷ್ಟು ಮಳೆ ಕೊರತೆ: 75 ತಾಲೂಕುಗಳು ಬರ ಪೀಡಿತ
ರಾಜ್ಯದಲ್ಲಿ ಪ್ರಸ್ತುತ ಸುಮಾರು ಶೇ. 60 ರಷ್ಟು ಮಳೆ ಕೊರತೆ ಕಂಡುಬAದಿದ್ದು, ಸಾಮಾನ್ಯ ಕೊರತೆಯ ಪ್ರಮಾಣವು ಶೇ. 30 ರಿಂದ ಶೇ. 59 ಕ್ಕೆ ಏರಿಕೆಯಾಗಿದೆ. ರಾಜ್ಯದ ಒಟ್ಟು 175 ತಾಲೂಕುಗಳ ಪೈಕಿ ಈಗಾಗಲೇ 152 ಕ್ಕೂ ಹೆಚ್ಚು ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ವರದಿಯಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸುಮಾರು 75 ತಾಲೂಕುಗಳು ಬರಪೀಡಿತ ಎಂದು ಘೋಷಿಸಲು ಅರ್ಹತೆ ಪಡೆದಿದ್ದು, ಮುಂದಿನ ಹಂತವಾಗಿ ಜಂಟಿ ಪರಿಶೀಲನೆ ಹಾಗೂ ಮಣ್ಣಿನ ತೇವಾಂಶ ತಪಾಸಣೆಯನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ 15 ದಿನಗಳ ಒಳಗಾಗಿ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವ ಸಲುವಾಗಿ ಸವಿವರದೊಂದಿಗೆ ಅಧಿಕಾರಿಗಳು ವರದಿ ನೀಡಬೇಕು ಎಂದರು.
ಕುಡಿಯುವ ನೀರಿಗೆ ಮೊದಲ ಆದ್ಯತೆ:
ಯಾವುದೇ ಕಾರಣಕ್ಕೂ ರಾಜ್ಯದ ನಾಗರಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಬಾರದು. ಹಣದ ಕೊರತೆ ನೆಪ ಒಡ್ಡಬಾರದು ಎಂದು ಸ್ಪಷ್ಟಪಡಿಸಿದ ಅವರು, ಹೊಸ ಬೋರ್ವೆಲ್ಗಳನ್ನು ಕೊರೆಯುವ ಬದಲು, ಈಗಾಗಲೇ ನೀರಿದ್ದ ಹಳೆಯ ಬೋರ್ವೆಲ್ಗಳನ್ನು ಗುರುತಿಸಿ ಅಗತ್ಯವಿದ್ದಲ್ಲಿ ರಿ-ಡ್ರಿಲ್ಲಿಂಗ್ ಮಾಡಬೇಕು. ಬೋಗಸ್ ಬೋರ್ವೆಲ್ ಬಿಲ್ ಸೃಷ್ಟಿಸಿದರೆ ಅದಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ನೀರಿನ ಕೊರತೆ ನೆಪದಲ್ಲಿ ಟ್ರಾನ್ಸ್ಫಾರ್ಮರ್ ಹಾಗೂ ಪಂಪ್ಸೆಟ್ಗಳ ಅಕ್ರಮ ಸಾಗಣೆ ಅಥವಾ ರಾಜಕೀಯ ಪ್ರಭಾವದ ವರ್ಗಾವಣೆ ದಂಧೆಗಳಿಗೆ ಆಸ್ಪದ ನೀಡಬಾರದು ಎಂದು ಎಚ್ಚರಿಸಿದರು.
ಕೇಂದ್ರದ ಅಧ್ಯಯನ ತಂಡದ ಭೇಟಿ: ಅಧಿಕಾರಿಗಳಿಗೆ ಸೂಚನೆ
ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ವಿಶೇಷ ತಂಡವು ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಕೇಂದ್ರದ ತಂಡ ಭೇಟಿ ನೀಡಿದಾಗ ಅಧಿಕಾರಿಗಳು ಕೇವಲ ಕಾಗದದ ವರದಿಗಳನ್ನು ನೀಡದೆ, ವಸ್ತುನಿಷ್ಠ ಅಂಕಿ-ಅAಶಗಳನ್ನು ಬೆರಳ ತುದಿಯಲ್ಲಿ ಸಿದ್ಧವಾಗಿಟ್ಟುಕೊಂಡಿರಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರನ್ನು ಒಳಗೊಂಡ ಕಾರ್ಯಪಡೆ ಸಭೆಗಳನ್ನು ನಡೆಸಿ, ತಾಲೂಕುವಾರು ನಿಖರ ಮಾಹಿತಿ ನೀಡಬೇಕು. ಹಾಗಾಗಿ ಅಧಿಕಾರಿಗಳು ಕಚೇರಿಗಳಲ್ಲಿ ಕೂರದೆ ನೇರವಾಗಿ ವಾಸ್ತವ ಸ್ಥಿತಿಯ ಅಧ್ಯಯನಕ್ಕೆ ಕ್ಷೇತ್ರ ಭೇಟಿಗೆ ಮುಂದಾಗಬೇಕು ಎಂದು ಸೂಚಿಸಿದರು.
ಪ್ರಜಾಸೇವಾ ನೂತನ ಇಲಾಖೆಗೆ ಚಾಲನೆ:
ಜನರ ಸಮಸ್ಯೆಗಳನ್ನು ತ್ವರಿತವಾಗಿ ಆಲಿಸಲು ಮತ್ತು ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ‘ಪ್ರಜಾಸೇವಾ ಇಲಾಖೆ’ಯನ್ನು ಬಲಪಡಿಸಲಾಗುತ್ತಿದ್ದು, ಅತ್ಯಂತ ದಕ್ಷ, ಕ್ರಿಯಾಶೀಲ ಹಾಗೂ ಸಮರ್ಪಣಾ ಮನೋಭಾವದ ಹಿರಿಯ ಅಧಿಕಾರಿಗಳನ್ನು ಇದಕ್ಕೆ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ತಮ್ಮ ದೈನಂದಿನ ಚಲನವಲನಗಳ ವರದಿಯನ್ನು ಕಡ್ಡಾಯವಾಗಿ ಪ್ರಜಾಸೇವಾ ಇಲಾಖೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ರಜೆ ಪಡೆಯದೇ, ದಿನದ 24 ಗಂಟೆಯೂ ಕರ್ತವ್ಯಕ್ಕೆ ಲಭ್ಯವಿರಬೇಕು ಮತ್ತು ತಳಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು.
ಆಡಳಿತ ಸುಧಾರಣೆಗೆ ಮಾಜಿ ಮುಖ್ಯ ಕಾರ್ಯದರ್ಶಿಗಳ ಸಮಿತಿ:
ಬರ ನಿರ್ವಹಣೆ ಹಾಗೂ ಸರ್ಕಾರದ ಪ್ರಮುಖ ಯೋಜನೆಗಳ ಪರಾಮರ್ಶೆಗಾಗಿ ಅನುಭವಿ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಜೆ.ಎಫ್. ಭಾಸ್ಕರ್, ರತ್ನಪ್ರಭಾ ಮತ್ತು ಪ್ರಸಾದ್ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಆಡಳಿತಾತ್ಮಕ ಸುಧಾರಣೆ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳ ಅನುದಾನದ ಸಮರ್ಪಕ ಬಳಕೆಯ ಕುರಿತು ಈ ಸಮಿತಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಿಎಂ ತಿಳಿಸಿದರು.
ರಾಜ್ಯದ ಜನತೆಗೆ ಬರಗಾಲದ ಬಿಸಿ ತಟ್ಟದಂತೆ ಜಿಲ್ಲಾಡಳಿತಗಳು ತಕ್ಷಣವೇ ಎಚ್ಚೆತ್ತುಕೊಂಡು, ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಖಾತರಿ ಯೋಜನೆಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಸಭೆಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಉದ್ಭವಿಸಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ತಳಮಟ್ಟಕ್ಕೆ ತಲುಪಿಸಲು ಸರ್ಕಾರವು ಮಹತ್ವದ ಹೆಜ್ಜೆಗಳನ್ನಿಟ್ಟಿದೆ. ಉದ್ಯೋಗ ಸೃಷ್ಟಿ, ಜಲ ಸಂರಕ್ಷಣೆ, ಕೃಷಿ-ತೋಟಗಾರಿಕೆ ಇಲಾಖೆಗಳ ಸಮನ್ವಯ ಹಾಗೂ ಯುವ ಸಮುದಾಯದ ಸಬಲೀಕರಣಕ್ಕಾಗಿ ವಿಸ್ತೃತ ಯೋಜನೆ ರೂಪಿಸಲಾಗುತ್ತಿದ್ದು, ಈ ಕುರಿತು ಸರ್ಕಾರದ ಉನ್ನತ ಮಟ್ಟದಲ್ಲಿ ಗಂಭೀರ ಸಮಾಲೋಚನೆ ನಡೆಸಲಾಗಿದೆ. ನಿವೇಶನ ರಹಿತರು ಮತ್ತು ಬಡ ಜನರಿಗೆ ಭೂಮಿ ಹಾಗೂ ವಸತಿ ಒದಗಿಸುವ ‘ಭೂ ಗ್ಯಾರಂಟಿ’ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಜನತೆ ಗುಳೆ ಹೋಗುವುದನ್ನು ತಪ್ಪಿಸಲು ಎಲ್ಲ ಜಿಲ್ಲೆಗಳಲ್ಲಿ ಕೂಡಲೇ ವಿಬಿ- ಜಿ ರಾಮ ಜಿ ಯೋಜನೆಯಡಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಅನುಷ್ಠಾನಗಳಿಸಬೇಕು. ಅದೇರೀತಿ ಮತದಾರರ ಗಣತಿ ಸಂಬAಧ ಎಸ್ಐಆರ್ ಕಾರ್ಯವು ಎಲ್ಲ ಜಿಲ್ಲೆಗಳಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು ಎಂದು ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಕಂದಾಯ, ಕ್ರೀಡಾ ಸಚಿವರಾದ ಡಾ.ಜಿ. ಪರಮೇಶ್ವರ, ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್, ನೀರಾವರಿ ಸಚಿವರಾದ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಶ್ವರ ಖಂಡ್ರೆ, ಆರೋಗ್ಯ ಸಚಿವರಾದ ಯು ಟಿ ಖಾದರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












