ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.ಮುಖ್ಯ ನ್ಯಾಯಮೂರ್ತಿ ವಿಭು ಬಕ್ರೂ ಅವರ ನೇತೃತ್ವದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿ, ಅರ್ಜಿದಾರರು ಮಂಡಿಸಿದ ವಾದಗಳಲ್ಲಿ ಕಾನೂನುಬದ್ಧ ಆಧಾರ ಕಂಡುಬರದ ಹಿನ್ನೆಲೆಯಲ್ಲಿ ಅರ್ಜಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿತು.
ಅರ್ಜಿದಾರ ಕೆ.ಬಿ. ರಾಜೇಶ್ ಪರ ವಾದ ಮಂಡಿಸಿದ ವಕೀಲರು, ಭೂಸ್ವಾಧೀನಕ್ಕೂ ಮುನ್ನ ಸಾಮಾಜಿಕ ಪರಿಣಾಮ ಅಧ್ಯಯನ (Social Impact Assessment) ನಡೆಸಿಲ್ಲ, ಪುನರ್ವಸತಿ ಕ್ರಮಗಳನ್ನು ಕೈಗೊಂಡಿಲ್ಲ ಹಾಗೂ ಯೋಜನೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಯೋಜನೆಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಯಾವ ಕಾಯ್ದೆಯ ಯಾವ ವಿಧಿಯನ್ನು ಉಲ್ಲಂಘಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ” ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ವಕೀಲರು, ಹೊಸ ಭೂಸ್ವಾಧೀನ ಕಾಯ್ದೆಯಡಿ ಪ್ರಕ್ರಿಯೆ ಅನುಸರಿಸಲಾಗಿಲ್ಲ ಎಂದು ವಾದಿಸಿದರು. ಆದರೆ, ಸರ್ಕಾರದ ಪರವಾಗಿ ಭೂಸ್ವಾಧೀನ ಪ್ರಕ್ರಿಯೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (KIADB/KIAD) ಕಾಯ್ದೆಯಡಿ ನಡೆದಿದ್ದು, ಪರಿಹಾರ ನೀಡುವಲ್ಲಿ ಹೊಸ ಕಾಯ್ದೆಯ ನಿಯಮಗಳನ್ನು ಅನುಸರಿಸಲಾಗಿದೆ ಎಂದು ವಿವರಿಸಲಾಯಿತು.ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಅರ್ಜಿಯಲ್ಲಿ ಸಮರ್ಪಕ ಕಾನೂನು ಆಧಾರ ಇಲ್ಲವೆಂದು ಅಭಿಪ್ರಾಯಪಟ್ಟು ಪಿಐಎಲ್ ಅನ್ನು ವಜಾಗೊಳಿಸಿತು. ಜೊತೆಗೆ, ಭೂಸ್ವಾಧೀನಕ್ಕೆ ಸಂಬಂಧಿಸಿದ ಇತರೆ ವಿಚಾರಗಳನ್ನು ಮೆರಿಟ್ ಆಧಾರದ ಮೇಲೆ ಸೂಕ್ತ ವೇದಿಕೆಯಲ್ಲಿ ಪರಿಶೀಲಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.











