ಆಕಾಶದತ್ತ ನೋಡಿದಾಗ ಬಣ್ಣಬಣ್ಣದ ಗಾಳಿಪಟಗಳು ಹಾರುತ್ತಿರುವ ದೃಶ್ಯ ಯಾರನ್ನಾದರೂ ಆಕರ್ಷಿಸುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಗಾಳಿಪಟ ಹಾರಿಸುವುದನ್ನು ಇಷ್ಟಪಡುತ್ತಾರೆ. ಗಾಳಿಪಟ ಕೇವಲ ಆಟಿಕೆಯಲ್ಲ; ಅದರ ಹಿಂದೆ ಸಾವಿರಾರು ವರ್ಷಗಳ ಇತಿಹಾಸ, ವಿಜ್ಞಾನ ಮತ್ತು ಸಂಸ್ಕೃತಿಯ ಕಥೆಯಿದೆ.
ಗಾಳಿಪಟದ ಮೂಲವನ್ನು ಸಾಮಾನ್ಯವಾಗಿ ಪ್ರಾಚೀನ ಚೀನಾಕ್ಕೆ ಸೇರಿಸಲಾಗುತ್ತದೆ. ಐತಿಹಾಸಿಕ ದಾಖಲೆಗಳ ಪ್ರಕಾರ ಸುಮಾರು ಕ್ರಿ.ಪೂ. 5ನೇ ಶತಮಾನದಲ್ಲಿಯೇ ಚೀನಾದಲ್ಲಿ ಗಾಳಿಪಟಗಳನ್ನು ತಯಾರಿಸಿ ಹಾರಿಸಲಾಗುತ್ತಿತ್ತು. ಆರಂಭಿಕ ಗಾಳಿಪಟಗಳನ್ನು ಮರ ಮತ್ತು ಬಿದಿರಿನಿಂದ ತಯಾರಿಸಲಾಗುತ್ತಿತ್ತು. ನಂತರ ರೇಷ್ಮೆ ಮತ್ತು ಕಾಗದವನ್ನು ಬಳಸಲಾಯಿತು.ಆ ಕಾಲದಲ್ಲಿ ಗಾಳಿಪಟಗಳನ್ನು ಕೇವಲ ಆಟಕ್ಕಾಗಿ ಬಳಸುತ್ತಿರಲಿಲ್ಲ. ಸಂದೇಶ ಕಳುಹಿಸಲು, ದೂರ ಅಳೆಯಲು, ಸಂಕೇತ ನೀಡಲು ಹಾಗೂ ಕೆಲವು ಸಂದರ್ಭಗಳಲ್ಲಿ ಸೈನಿಕ ಉದ್ದೇಶಗಳಿಗೂ ಬಳಸಲಾಗುತ್ತಿತ್ತು. ಹೀಗಾಗಿ ಗಾಳಿಪಟವು ಮನರಂಜನೆಯ ಜೊತೆಗೆ ಮಾನವನ ಹಾರಾಟದ ಕಲ್ಪನೆಗೂ ಸಂಬಂಧ ಹೊಂದಿದೆ.
ಭಾರತಕ್ಕೆ ಗಾಳಿಪಟ ಹೇಗೆ ಬಂತು?
ಕಾಲಕ್ರಮೇಣ ಗಾಳಿಪಟವು ಏಷ್ಯಾದ ಹಲವು ಭಾಗಗಳಿಗೆ ಹರಡಿತು. ಭಾರತದಲ್ಲಿಯೂ ಗಾಳಿಪಟದ ಸಂಪ್ರದಾಯ ಬಹಳ ಹಿಂದಿನಿಂದಲೂ ಇದೆ. ಕೆಲವು ಐತಿಹಾಸಿಕ ಮೂಲಗಳ ಪ್ರಕಾರ ಬೌದ್ಧ ಧರ್ಮಪ್ರಚಾರಕರು ಹಾಗೂ ವ್ಯಾಪಾರ ಮಾರ್ಗಗಳ ಮೂಲಕ ಗಾಳಿಪಟದ ಸಂಸ್ಕೃತಿ ಭಾರತಕ್ಕೆ ಬಂದಿರಬಹುದು ಎಂದು ಹೇಳಲಾಗಿದೆ. ಆದರೆ ಗಾಳಿಪಟದ ಭಾರತ ಪ್ರವೇಶದ ನಿಖರ ಕಾಲದ ಬಗ್ಗೆ ಎಲ್ಲ ಮೂಲಗಳಲ್ಲೂ ಒಂದೇ ಅಭಿಪ್ರಾಯವಿಲ್ಲ.
ಭಾರತೀಯ ಸಾಹಿತ್ಯದಲ್ಲಿಯೂ ಗಾಳಿಪಟದ ಉಲ್ಲೇಖಗಳು ಕಂಡುಬರುತ್ತವೆ. 13ನೇ ಶತಮಾನದ ಸಂತ-ಕವಿ ನಾಮದೇವರ ಕೃತಿಗಳಲ್ಲಿ ಕಾಗದದ ಗಾಳಿಪಟದ ಉಲ್ಲೇಖವಿದೆ ಎಂದು ಸಾಹಿತ್ಯಿಕ ದಾಖಲೆಗಳು ತಿಳಿಸುತ್ತವೆ. ತುಳಸಿದಾಸರ ರಾಮಚರಿತಮಾನಸದಲ್ಲಿಯೂ ಗಾಳಿಪಟಕ್ಕೆ ಸಂಬಂಧಿಸಿದ ಪ್ರಸಂಗವಿದೆ.
ಗಾಳಿಪಟದ ರಚನೆ ಹೇಗಿರುತ್ತದೆ?
ಸಾಮಾನ್ಯ ಗಾಳಿಪಟವನ್ನು ಮುಖ್ಯವಾಗಿ ಬಿದಿರಿನ ಕಡ್ಡಿ, ಕಾಗದ ಅಥವಾ ಹಗುರವಾದ ವಸ್ತು ಮತ್ತು ದಾರ ಬಳಸಿ ತಯಾರಿಸಲಾಗುತ್ತದೆ.ಗಾಳಿಪಟದ ಮಧ್ಯದಲ್ಲಿ ಮತ್ತು ಅಡ್ಡವಾಗಿ ಕಡ್ಡಿಗಳನ್ನು ಜೋಡಿಸಿ ಅದರ ಚೌಕಟ್ಟು ತಯಾರಿಸಲಾಗುತ್ತದೆ. ಅದರ ಮೇಲೆ ಕಾಗದವನ್ನು ಅಂಟಿಸಲಾಗುತ್ತದೆ. ನಂತರ ಗಾಳಿಪಟಕ್ಕೆ ದಾರವನ್ನು ಜೋಡಿಸಲಾಗುತ್ತದೆ.
ಗಾಳಿಪಟದ ಆಕಾರಕ್ಕೆ ಅನುಗುಣವಾಗಿ ಅದರ ರಚನೆಯೂ ಬದಲಾಗುತ್ತದೆ. ಬುಗುರಿ ಪಟ, ಹನುಮಾನ್ ಪಟ, ತಾರಾ ಪಟ, ಚೌಕದ ಪಟ, ಆಯತ ಪಟ, ಹಾವಿನ ಪಟ ಸೇರಿದಂತೆ ಹಲವು ಬಗೆಯ ಗಾಳಿಪಟಗಳನ್ನು ಕಾಣಬಹುದು.
ಗಾಳಿಪಟ ಹೇಗೆ ಹಾರುತ್ತದೆ?
ಗಾಳಿಪಟ ಹಾರಲು ಗಾಳಿ ಅತ್ಯಂತ ಮುಖ್ಯ. ಗಾಳಿ ಗಾಳಿಪಟದ ಮೇಲ್ಮೈಗೆ ತಾಗಿದಾಗ ಗಾಳಿಪಟದ ಮೇಲೆ ಮತ್ತು ಕೆಳಗೆ ಉಂಟಾಗುವ ಗಾಳಿಯ ಒತ್ತಡದ ವ್ಯತ್ಯಾಸದಿಂದ ಅದು ಮೇಲಕ್ಕೆ ಏರಲು ಸಹಾಯವಾಗುತ್ತದೆ.ಗಾಳಿಪಟದ ದಾರವನ್ನು ಹಿಡಿದು ಸರಿಯಾದ ದಿಕ್ಕಿನಲ್ಲಿ ಎಳೆದಾಗ ಗಾಳಿಪಟ ಗಾಳಿಯನ್ನು ಎದುರಿಸಿ ಮೇಲಕ್ಕೆ ಏರುತ್ತದೆ. ದಾರವನ್ನು ಸಡಿಲಿಸಿದರೆ ಅಥವಾ ಎಳೆದರೆ ಗಾಳಿಪಟದ ಚಲನೆಯನ್ನೂ ನಿಯಂತ್ರಿಸಬಹುದು.ಹೀಗಾಗಿ ಗಾಳಿಪಟವು ಮಕ್ಕಳಿಗೆ ಆಟದ ಮೂಲಕ ಗಾಳಿ, ಚಲನೆ, ಸಮತೋಲನ ಮತ್ತು ಹಾರಾಟದ ವಿಜ್ಞಾನವನ್ನು ತಿಳಿಸಿಕೊಡುವ ಸುಂದರ ಉದಾಹರಣೆಯಾಗಿದೆ.

ಯಾವಾಗ ಗಾಳಿಪಟ ಹಾರಿಸುತ್ತಾರೆ?
ಭಾರತದಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯವು ವಿವಿಧ ಹಬ್ಬಗಳೊಂದಿಗೆ ಬೆಸೆದುಕೊಂಡಿದೆ. ವಿಶೇಷವಾಗಿ ಮಕರ ಸಂಕ್ರಾಂತಿ ಅಥವಾ ಉತ್ತರಾಯಣ ಸಂದರ್ಭದಲ್ಲಿ ಜನರು ಗಾಳಿಪಟ ಹಾರಿಸುತ್ತಾರೆ. ಸಾಮಾನ್ಯವಾಗಿ ಜನವರಿಯಲ್ಲಿ ನಡೆಯುವ ಈ ಹಬ್ಬದ ಸಮಯದಲ್ಲಿ ಭಾರತದ ಹಲವು ಭಾಗಗಳ ಆಕಾಶ ಬಣ್ಣಬಣ್ಣದ ಗಾಳಿಪಟಗಳಿಂದ ಕಂಗೊಳಿಸುತ್ತದೆ.ಗುಜರಾತ್ನಲ್ಲಿ ಉತ್ತರಾಯಣದ ಸಂದರ್ಭದಲ್ಲಿ ಗಾಳಿಪಟ ಹಾರಿಸುವುದು ಅತ್ಯಂತ ಜನಪ್ರಿಯ ಸಂಪ್ರದಾಯವಾಗಿದೆ. ರಾಜಸ್ಥಾನ, ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿಯೂ ಗಾಳಿಪಟ ಉತ್ಸವಗಳು ನಡೆಯುತ್ತವೆ. ಕರ್ನಾಟಕದ ಕರಾವಳಿ ಭಾಗವಾದ ಕಾರವಾರ ಮತ್ತು ಗೋಕರ್ಣದಲ್ಲಿಯೂ ಗಾಳಿಪಟ ಉತ್ಸವದ ಸಂಪ್ರದಾಯವಿದೆ.
ಭಾರತದ ಕೆಲವು ಪ್ರದೇಶಗಳಲ್ಲಿ ವಸಂತ ಪಂಚಮಿ, ಬಸಂತ್, ವಿಶ್ವಕರ್ಮ ಪೂಜೆ ಮುಂತಾದ ಸಂದರ್ಭಗಳಲ್ಲಿಯೂ ಗಾಳಿಪಟ ಹಾರಿಸುವ ಪದ್ಧತಿ ಇದೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿಯೂ ಕೆಲವು ನಗರಗಳಲ್ಲಿ ಗಾಳಿಪಟ ಹಾರಿಸುವ ಸಂಪ್ರದಾಯ ಕಂಡುಬರುತ್ತದೆ.ಗಾಳಿಪಟವು ಭಾರತದಲ್ಲಿ ಕೇವಲ ಆಟವಲ್ಲ. ಇದು ಕುಟುಂಬದವರು,ಸ್ನೇಹಿತರು ಮತ್ತು ನೆರೆಹೊರೆಯವರು ಒಟ್ಟಾಗಿ ಸೇರಿ ಸಂಭ್ರಮಿಸುವ ಒಂದು ಚಟುವಟಿಕೆಯಾಗಿದೆ.
ಗಾಳಿಪಟ ಆಕಾಶಕ್ಕೆ ಏರುವಾಗ ಮಕ್ಕಳ ಮುಖದಲ್ಲಿ ಮೂಡುವ ಸಂತೋಷ, ಗಾಳಿಯೊಂದಿಗೆ ಗಾಳಿಪಟದ ಆಟ, ಬಣ್ಣಬಣ್ಣದ ಆಕಾಶ—ಇವೆಲ್ಲವೂ ಗಾಳಿಪಟ ಹಾರಾಟವನ್ನು ವಿಶೇಷವಾಗಿಸುತ್ತವೆ.
ಇತಿಹಾಸದ ಕೆಲವು ಸಂದರ್ಭಗಳಲ್ಲಿ ಗಾಳಿಪಟವನ್ನು ಸಾಮಾಜಿಕ ಮತ್ತು ರಾಜಕೀಯ ಅಭಿವ್ಯಕ್ತಿಗೂ ಬಳಸಲಾಗಿದೆ. ಉದಾಹರಣೆಗೆ, 1928ರಲ್ಲಿ ಸೈಮನ್ ಆಯೋಗದ ವಿರುದ್ಧದ ಪ್ರತಿಭಟನೆಗಳಲ್ಲಿ “Simon Go Back” ಎಂಬ ಸಂದೇಶಗಳನ್ನು ಬರೆದ ಗಾಳಿಪಟಗಳನ್ನು ಹಾರಿಸಲಾಗಿತ್ತು ಎಂದು ದಾಖಲೆಗಳಿವೆ.
ಗಾಳಿಪಟ ಹಾರಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಬಹಳ ಮುಖ್ಯ. ವಿದ್ಯುತ್ ತಂತಿಗಳ ಸಮೀಪ, ರಸ್ತೆ ಬದಿಯಲ್ಲಿ ಅಥವಾ ಅಪಾಯಕಾರಿ ಸ್ಥಳಗಳಲ್ಲಿ ಗಾಳಿಪಟ ಹಾರಿಸಬಾರದು. ಪಕ್ಷಿಗಳು ಮತ್ತು ಇತರ ಜೀವಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು.
ವಿಶೇಷವಾಗಿ ಗಾಜು ಅಥವಾ ಲೋಹದ ಪುಡಿ ಬಳಸಿ ತಯಾರಿಸಿದ ಅಪಾಯಕಾರಿ ಮಾಂಜಾ ದಾರವನ್ನು ಬಳಸಬಾರದು. ಪರಿಸರಕ್ಕೂ, ಮನುಷ್ಯರಿಗೂ ಮತ್ತು ಪಕ್ಷಿಗಳಿಗೂ ಸುರಕ್ಷಿತವಾದ ದಾರವನ್ನು ಬಳಸುವುದು ಉತ್ತಮ.
ಒಂದು ಸರಳ ಕಾಗದದ ತುಂಡು, ಕೆಲವು ಕಡ್ಡಿಗಳು ಮತ್ತು ಒಂದು ದಾರ—ಇವುಗಳಿಂದ ತಯಾರಾಗುವ ಗಾಳಿಪಟ ಮನುಷ್ಯನ ಹಾರುವ ಕನಸಿನ ಪ್ರತೀಕವಾಗಿದೆ. ಸಾವಿರಾರು ವರ್ಷಗಳ ಇತಿಹಾಸದಿಂದ ಇಂದಿನ ಹಬ್ಬಗಳವರೆಗೆ ಗಾಳಿಪಟ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿದೆ.ಗಾಳಿಪಟ ಆಕಾಶದಲ್ಲಿ ಹಾರುತ್ತದೆ; ಆದರೆ ಅದು ಮಕ್ಕಳ ಮನಸ್ಸಿನಲ್ಲಿ ಕನಸುಗಳನ್ನು ಹಾರಿಸುತ್ತದೆ.












