ಬೆಂಗಳೂರು; ಸದನದಲ್ಲಿ ಸದ್ಯ ಬಜೆಟ್ ಮೇಲಿನ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನದಲ್ಲಿ ಆಡಳಿತ ಪಕ್ಷ ವಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರು ಸದನಕ್ಕೆ ಇಂದು ಗೈರಾಗಿರುವುದನ್ನೇ ಇಟ್ಟುಕೊಂಡು ವಿಪಕ್ಷಗಳು ಟಾರ್ಗೆಟ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಬರಲೇಬೇಕೆಂದು ಒತ್ತಾಯ ಮಾಡಿದ್ದಾರೆ. ಈ ವಿಚಾರ ಸದನದಲ್ಲಿ ಗದ್ದಲ ಉಂಟು ಮಾಡಿದೆ.

ಅಶ್ವತ್ಥ್ ನಾರಾಯಣ್ ಈ ವೇಳೆ ಮಾತನಾಡುತ್ತಾ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಅವರೇ ಇಲ್ಲದೆ ಹೋದಲ್ಲಿ ಹೇಗೆ ಚರ್ಚೆ ಮಾಡುವುದು ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಚಿವ ಚೆಲುವರಾಯಸ್ವಾಮಿ, ಹಾಗಾದ್ರೆ ಸಿಎಂ ಇಲ್ಲದೆ ಹೋದರೆ ನೀವೂ ಚರ್ಚೆ ಮಾಡುವುದಿಲ್ಲ. ಅವರಿಗೆ ಆರೋಗ್ಯ ಸರಿ ಇಲ್ಲ ಅನ್ನೋದು ನಿಮಗೆ ಗೊತ್ತಿಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ.

ಈ ವೇಳೆ ಅಶ್ವತ್ಥ್ ನಾರಾಯಣ್ ಅವರು ಸಿಎಂ ಅವರಿಗೆ ಆರೋಗ್ಯ ಸರಿ ಇಲ್ಲ ಅಂತ ಲೆಟರ್ ಏನಾದ್ರೂ ಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಆಡಳಿತ ಸರ್ಕಾರದ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ನಾವೂ ಹದಿನೈದು ಮಂದಿ ಶಾಸಕರು ಇಲ್ಲಿದ್ದೇವೆ. ಆದರೂ ನಿಮಗೆ ಸಿಎಂ ಅವರೇ ಬೇಕು ಅಂತ ಹಠ ಹಿಡಿದರೆ ಹೇಗೆ ಎಂದು ಕೇಳಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಅವರು ಸದ್ಯ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದಾರೆ. ಈ ಬಾರಿಯ ಬಜೆಟ್ ಅನ್ನು ಕೂಡ ಕುಳಿತುಕೊಂಡೆ ಓದಿದ್ದಾರೆ. ಇನ್ನು ವಿಶ್ರಾಂತಿಯ ಅಗತ್ಯ ತುಂಬಾನೇ ಇದೆ. ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ.


