ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 02 : ಅಕ್ರಮ ಸಕ್ರಮ ಯೋಜನೆಯಡಿ ರೈತರ ಪಂಪ್‍ಸೆಟ್‍ಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಪುನಃ ಆರ್.ಆರ್.ನಂ. ಮೂಲಕ ಹಣ ಪಾವತಿಸುವಂತೆ ಒತ್ತಾಯಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ತಿಪ್ಪಜ್ಜಿ ಸರ್ಕಲ್‍ನಲ್ಲಿರುವ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್‍ಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದ್ದು, ರೈತರು ತೋಟಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಬೆಸ್ಕಾಂ ಇಲಾಖೆಯಲ್ಲಿ ರೈತರ ಪಂಪ್‍ಸೆಟ್‍ಗಳಿಗೆ ಅಕ್ರಮ ಸಕ್ರಮದಡಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ಮತ್ತೆ ಆರ್.ಆರ್.ನಂ. ಮೂಲಕ ಹಣ ಕಟ್ಟಬೇಕೆಂದು ಅಧಿಕಾರಿಗಳು ರೈತರನ್ನು ಹಿಂಸಿಸುತ್ತಿದ್ದಾರೆ. ಮೊದಲೆ ಸಾಲದ ಸುಳಿಯಲ್ಲಿ ಸಿಲುಕಿರುವ ರೈತ ಜೀವನ ಮಾಡುವುದೇ ದುಸ್ತರವಾಗಿರುವ ಹಣ ಎಲ್ಲಿಂದ ಕಟ್ಟಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಮಲ್ಲಿಕಾರ್ಜುನ ಕಾರ್ಯನಿರ್ವಾಹಕ ಅಭಿಯಂತರರನ್ನು ಪ್ರಶ್ನಿಸಿದರು.?

ತೋಟದ ಮನೆಗಳಿಗೆ ಏಕಾಏಕಿ ಸಿಂಗಲ್ ಫೇಸ್ ತೆಗೆದಿರುವುದರಿಂದ ರೈತರ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆಯಲ್ಲದೆ ರಾತ್ರಿ ವೇಳೆಯಲ್ಲಿ ವಿಷ ಜಂತುಗಳ ಭಯವಿದೆ. ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಹೂವು ಬೆಳೆಯುತ್ತಿರುವ ರೈತರು ಟಿ.ಪಿ.ತೆಗೆದುಕೊಂಡು ಲೈಟಿಂಗ್ ಮೂಲಕ ಹೂವಿನ ಗಿಡಗಳನ್ನು ರಕ್ಷಿಸಿಕೊಳ್ಳಬೇಕಾಗಿದೆ.
ಗ್ರಾಮಾಂತರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ಗಳು ಹಣ ಕಟ್ಟುವಂತೆ ರೈತರ ಮೇಲೆ ಒತ್ತಡ ಹೇರುತ್ತಿರುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಹೆಚ್.ಸದಾಶಿವಪ್ಪ, ಎನ್.ಇ.ಕೊಟ್ರೇಶ್, ಕಲ್ಲೇಶ, ಕಾಂತರಾಜು, ಭರತ್, ಮಂಜಣ್ಣ, ಹೆಚ್.ಆರ್.ಪರಮಶಿವ, ಎಸ್.ಪ್ರವೀಣ್‍ಕುಮಾರ್, ಬಿ.ಎಸ್.ಶಿವಕುಮಾರ, ಜಿ.ಕೆ.ನಾಗರಾಜ, ಆರ್.ಬಿ.ನಿಜಲಿಂಗಪ್ಪ, ಹೆಚ್.ಎಲ್.ರಮೇಶ, ಸಿ.ಕೆ.ಸಿದ್ದೇಶಿ ಜಿ.ಕೆ.ನಾಗಣ್ಣ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.











