ಸೂರತ್ : ಮೊಬೈಲ್‌ನಲ್ಲಿ ಗೇಮ್ ಆಡುವ ಚಟಕ್ಕೆ ಸಂಬಂಧಿಸಿದಂತೆ ಆರಂಭವಾದ ಸಣ್ಣ ಜಗಳವೊಂದು ತಂದೆಯ ಬರ್ಬರ ಹತ್ಯೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ.
ಸದಾ ಮೊಬೈಲ್‌ನಲ್ಲೇ ಮುಳುಗಿದ್ದ ಮಗಳಿಗೆ ತಂದೆ ಬುದ್ಧಿವಾದ ಹೇಳಿ, ಮೊಬೈಲ್ ಒಡೆದು ಹಾಕಿದ್ದಕ್ಕೆ ಆಕ್ರೋಶಗೊಂಡ 22 ವರ್ಷದ ಯುವತಿ, ತಂದೆಯ ತಲೆಗೆ ಕುಕ್ಕರ್ ಮುಚ್ಚಳದಿಂದ ಬಲವಾಗಿ ಹೊಡೆದು ಬಳಿಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಕಾಜಲ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮೊಬೈಲ್ ನೆಲಕ್ಕೆಸೆದ ತಂದೆಯ ಮೇಲೆ ಮುಗಿಬಿದ್ದ ಮಗಳು
ಸೂರತ್‌ನ ಕೋಸಾದ್ ಪ್ರದೇಶದಲ್ಲಿ ವಾಸವಿದ್ದ 55 ವರ್ಷದ ರಮೇಶ್ ಚೌಹಾಣ್ ಭಾನುವಾರ ಕೆಲಸ ಮುಗಿಸಿ ಮನೆಗೆ ಬಂದಾಗ, ಪತ್ನಿ ಮಂಜು ಅವರು ಮಗಳು ಕಾಜಲ್ ಮನೆಗೆಲಸಕ್ಕೆ ಸಹಾಯ ಮಾಡದೆ ಸದಾ ಮೊಬೈಲ್ ಗೇಮ್‌ನಲ್ಲೇ ಮುಳುಗಿರುತ್ತಾಳೆ ಎಂದು ದೂರು ನೀಡಿದ್ದರು. ಇದರಿಂದ ಕೋಪಗೊಂಡ ರಮೇಶ್, ಮೊಬೈಲ್ ಪಕ್ಕಕ್ಕಿಟ್ಟು ಕೆಲಸದಲ್ಲಿ ನೆರವಾಗುವಂತೆ ಮಗಳಿಗೆ ತಾಕೀತು ಮಾಡಿದ್ದಾರೆ.
ಆದರೆ ಆಕೆ ಅದಕ್ಕೆ ಸೊಪ್ಪು ಹಾಕದಿದ್ದಾಗ ರಮೇಶ್ ಆಕೆಯ ಕೈಯಿಂದ ಮೊಬೈಲ್ ಕಿತ್ತು ನೆಲಕ್ಕೆ ಅಪ್ಪಳಿಸಿ ಒಡೆದು ಹಾಕಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕಾಜಲ್, ಅಡುಗೆ ಮನೆಯಲ್ಲಿದ್ದ ಪ್ರೆಶರ್ ಕುಕ್ಕರ್ ಮುಚ್ಚಳದಿಂದ ರಮೇಶ್ ಅವರ ತಲೆಗೆ ಬಲವಾಗಿ ಹೊಡೆದಿದ್ದಾಳೆ. ಅಷ್ಟಕ್ಕೇ ನಿಲ್ಲದೆ, ಚಾಕುವಿನಿಂದ ಅವರ ಹೊಟ್ಟೆಯ ಭಾಗಕ್ಕೆ ಇರಿದಿದ್ದಾಳೆ. ರಮೇಶ್ ಅವರ ಚೀರಾಟ ಕೇಳಿ ತಾಯಿ ಅಡುಗೆ ಮನೆಗೆ ಧಾವಿಸುವಷ್ಟರಲ್ಲಿ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.











