Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಬಂದ್ ತಾತ್ಕಾಲಿಕ ಮುಂದೂಡಿಕೆ; ಮೂರು ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲು ರೈತ ಸಂಘದ ಗಡುವು

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 07 : ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಬರ ಪಟ್ಟಿಯಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ತಾರತಮ್ಯ ನೀತಿ ವಿರುದ್ದ ಸೆ.8 ರಂದು ಚಿತ್ರದುರ್ಗ ಬಂದ್‍ಗೆ ನೀಡಿದ್ದ ಕರೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಹೊಸದುರ್ಗ, ಹಿರಿಯೂರು ಹಾಗೂ ಚಳ್ಳಕೆರೆ ತಾಲ್ಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿರುವ ರಾಜ್ಯ ಸರ್ಕಾರ ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮುರು ತಾಲ್ಲೂಕುಗಳನ್ನು ಬರ ಪಟ್ಟಿಯಿಂದ ಹೊರಗಿಟ್ಟಿರುವುದಕ್ಕೆ ಚಿತ್ರದುರ್ಗ ಬಂದ್‍ಗೆ ನಿರ್ಧರಿಸಿದ್ದೆವು. ಆದರೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಗೆ ನೀರು ಹರಿಯುತ್ತಿರುವುದನ್ನು ಸಂಭ್ರಮಿಸುವ ಸಮಯದಲ್ಲಿ ಬಂದ್ ಕೈಬಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳು ನಮ್ಮಲ್ಲಿ ಮನವಿ ಮಾಡಿದ್ದರಿಂದ ತಾತ್ಕಾಲಿಕವಾಗಿ ಬಂದ್‍ನಿಂದ ಹಿಂದೆ ಸರಿದಿದ್ದೇವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಭೆ ಕರೆದು ಬರ ಪಟ್ಟಿಯಿಂದ ಕೈಬಿಟ್ಟು ಹೋಗಿರುವ ಮೂರು ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಚಿತ್ರದುರ್ಗ ಬಂದ್ ಮಾಡುವುದಾಗಿ ಎಚ್ಚರಿಸಿದರು.

ಚಿತ್ರದುರ್ಗದಲ್ಲಿ ಮಳೆ ಮಾಪನ ಕೇಂದ್ರ ಸರಿಯಿಲ್ಲದ ಪರಿಣಾಮ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ಕೊಡುತ್ತಿರುವುದರಿಂದ ಇಂತಹ ಯಡವಟ್ಟುಗಳಾಗುತ್ತಿದೆ ಎಂದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ ಬರ ಪೀಡಿತ ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಕಾರ್ಮಿಕರು ಕಷ್ಟದಲ್ಲಿದ್ದಾರೆ. ಹಿರಿಯೂರು, ಚಳ್ಳಕೆರೆ
ಹೊಸದುರ್ಗ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿರುವ ರಾಜ್ಯ ಸರ್ಕಾರ ಉಳಿದ ಮೂರು ತಾಲ್ಲೂಕುಗಳನ್ನು ಬರ ಪಟ್ಟಿಯಿಂದ ದೂರವಿಟ್ಟು ರೈತರಿಗೆ ಅನ್ಯಾಯವೆಸಗಿದೆ. ಇಪ್ಪತ್ತು ವರ್ಷಗಳ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ನೀರು ಚಿತ್ರದುರ್ಗಕ್ಕೆ ಹರಿಯುತ್ತಿರುವ ಸಂದರ್ಭದಲ್ಲಿ ಚಿತ್ರದುರ್ಗ ಬಂದ್ ಮಾಡುವುದು ಬೇಡವೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳು ಮನವಿ ಮಾಡಿರುವುದರಿಂದ ಸದಕ್ಕೆ ಬಂದ್ ಕೈಬಿಟ್ಟಿದ್ದೇವೆ. ಹಾಗಂತ ಮೈಮರೆತು ಕೂರುವುದಿಲ್ಲ. ಎಂಟು ದಿನದಲ್ಲಿ ರೈತರ ಸಭೆ ಕರೆದು ಚರ್ಚಿಸಿ ಉಳಿದಿರುವ ಮೂರು ತಾಲ್ಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರಿಸದಿದ್ದರೆ ಚಳುವಳಿ, ಬಂದ್ ಮಾಡುತ್ತೇವೆಂದರು.

ಎಂ.ಸಿದ್ದಪ್ಪ ಹಳಿಯೂರು ಮಾತನಾಡುತ್ತ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರಿಸುವುದಾಗಿ ಸಚಿವರು ನೀಡಿರುವ ಆಶ್ವಾಸನೆ ಬೇಗನೆ ಈಡೇರಬೇಕು. ಇಲ್ಲವಾದಲ್ಲಿ ನಾವುಗಳು ಕೈಗೊಂಡ ತೀರ್ಮಾನದಂತೆ ಮುಂದೆ ಚಿತ್ರದುರ್ಗ ಬಂದ್ ಮಾಡೆ ಮಾಡುತ್ತೇವೆಂದು ತಿಳಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಚಿಕ್ಕಬ್ಬಿಗೆರೆ ನಾಗರಾಜ್ ಮಾತನಾಡಿ ಚಿತ್ರದುರ್ಗಕ್ಕೆ ಭದ್ರೆ ಮೇಲ್ದಂಡೆ ಯೋಜನೆಯಿಂದ ನೀರು ಹರಿಯುತ್ತಿರುವುದಕ್ಕೆ ಖುಷಿ ಪಡುವ ಸಮಯದಲ್ಲಿ ಚಿತ್ರದುರ್ಗ ಬಂದ್ ಮಾಡುವುದು ಸರಿಯಲ್ಲ. ಸಚಿವರ ಮಾತಿಗೆ ಬೆಲೆ ಕೊಟ್ಟು ಚಿತ್ರದುರ್ಗ ಬಂದ್ ಮುಂದೂಡಿದ್ದೇವೆ. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದೆ ಬಂದ್ ಮಾಡುತ್ತೇವೆಂದರು.

ಯುವ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ಪ್ರದೀಪ್‍ಕುಮಾರ್ ನಾಯ್ಕ ಮಾತನಾಡಿ ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮುರು ತಾಲ್ಲೂಕುಗಳನ್ನು ಎಂಟು ದಿನಗಳಲ್ಲಿ ಬರ ಪೀಡಿತ ಪಟ್ಟಿಗೆ ಸೇರಿಸಬೇಕು. ಇಲ್ಲವಾದಲ್ಲಿ ಚಿತ್ರದುರ್ಗ ಬಂದ್ ನಡೆಸಿ ಮತ್ತೆ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆಂದು ಹೇಳಿದರು.
ಸೂರಪ್ಪ, ಸತ್ಯಪ್ಪ ಮಲ್ಲಾಪುರ, ಶಿವಣ್ಣ, ರಾಮರೆಡ್ಡಿ, ಸಿದ್ದರಾಮಣ್ಣ, ನಾಗರಾಜ್, ಚಂದ್ರಪ್ಪ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now