Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಿಕ್ಷಣಕ್ಕೆ ನೀಡುವ ಆದ್ಯತೆಯ ಮೇಲೆಯೇ ದೇಶದ ಅಭಿವೃದ್ಧಿ ನಿಂತಿದೆ : ಜಿ.ಎನ್. ಮಲ್ಲಿಕಾರ್ಜುನಪ್ಪ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 07 : “ಶಿಕ್ಷಣ ಕ್ಷೇತ್ರಕ್ಕೆ ನೀಡುವ ಆದ್ಯತೆಯ ಮೇಲೆಯೇ ದೇಶದ ಅಭಿವೃದ್ಧಿ ನಿಂತಿದೆ. ಗುರುವಿಗೆ ಪೂಜ್ಯನೀಯ ಸ್ಥಾನ ನೀಡುವ ಸಮಾಜ ಸರ್ವೋಚ್ಚ ಸ್ಥಾನಕ್ಕೆ ತಲುಪುತ್ತದೆ ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಜಿ.ಎನ್. ಮಲ್ಲಿಕಾರ್ಜುನಪ್ಪ ಹೇಳಿದರು. ಅವರು ಇಂದು

ನಗರದ ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಸೋಮವಾರ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಹಾಗೂ ಕರ್ನಾಟಕ ರಾಜ್ಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ನಿವೃತ್ತಿ ಶಿಕ್ಷಕರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ‘ವಿಜ್ಞಾನ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರ ಸದಾ ಪ್ರೇರಣಾದಾಯಕವಾದದ್ದು. ಜ್ಞಾನ ಮತ್ತು ಶಿಕ್ಷಣದಿಂದ ವಂಚಿತರಾದವರ ಬದುಕಿನಲ್ಲಿ ಅಕ್ಷರದ ಜ್ಯೋತಿ ಬೆಳಗಿಸಿ, ಅಭಿವೃದ್ಧಿಯ ಬಾಗಿಲು ತೆರೆಯುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಸಂಸ್ಕೃತಿಯ ಚಿಂತಕರಾಗಿರುವ ಶಿಕ್ಷಕರ ಜವಾಬ್ದಾರಿ ಇಂದು ಮತ್ತಷ್ಟು ಹೆಚ್ಚಿದೆ ಎಂದರು.

ಸಂಶೋಧನಾ ಕ್ಷೇತ್ರಕ್ಕೆ ಇಸ್ರೇಲ್ ನೀಡುವಷ್ಟು ಪ್ರಾಮುಖ್ಯತೆಯನ್ನು ಬೇರೆ ಯಾವುದೇ ದೇಶ ನೀಡುತ್ತಿಲ್ಲ. ಅಲ್ಲಿನ ಸಂಶೋಧನೆಗಳ ಪ್ರಯೋಜನವನ್ನು ಅಮೆರಿಕ ಪಡೆದುಕೊಳ್ಳುತ್ತಿದೆ. ಆದರೆ ಭಾರತದಲ್ಲಿ ಶಿಕ್ಷಣ ಕ್ಷೇತ್ರ ಲಾಭದಾಯಕವಲ್ಲ ಎಂಬ ಮನಸ್ಥಿತಿ ಕೆಲವು ಚುನಾಯಿತ ಜನಪ್ರತಿನಿಧಿಗಳಲ್ಲಿದೆ. ಪ್ರತಿ ಸರ್ಕಾರದಲ್ಲಿಯೂ ಇದಕ್ಕೆ ಉದಾಹರಣೆಗಳನ್ನು ಕಾಣಬಹುದು ಎಂದು ಹೇಳಿದರು.

ಸಮಾಜದಲ್ಲಿ ಅಸಮತೋಲನ ಮತ್ತು ಅರಾಜಕತೆ ಹೆಚ್ಚಾದರೆ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿ ನಿಲ್ಲುವುದಿಲ್ಲ. ಸಂಸ್ಕೃತಿ, ಶಿಕ್ಷಣ ಹಾಗೂ ಜ್ಞಾನದ ಕ್ರಿಯಾಶೀಲತೆಯ ಮೂಲಕ ಬದುಕನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಬೇಕು. ವಿದ್ಯಾರ್ಥಿಗಳಿಗೆ ಕೇವಲ ಅಂಕ ಗಳಿಸುವ ಶಿಕ್ಷಣವಲ್ಲ, ಬದುಕಿಗೆ ಉಪಯೋಗವಾಗುವ ಶಿಕ್ಷಣ ನೀಡಬೇಕು. ಶಿಕ್ಷಕರ ಮೇಲೆ ನಿರೀಕ್ಷೆ ಹೆಚ್ಚಿದ್ದು, ಸ್ವಪ್ರೇರಣೆಯಿಂದ ಮಾತ್ರ ದೊಡ್ಡ ಸಾಧನೆ ಸಾಧ್ಯ ಎಂದರು.

ಸಾಧಕರನ್ನು ಗೌರವಿಸುವ ಮೂಲಕ ಮತ್ತೊಬ್ಬರಿಗೆ ಪ್ರೇರಣೆ ನೀಡಿದಂತಾಗುತ್ತದೆ. ಶಿಕ್ಷಕರಿಗೆ ಕಲಿಯುವುದು ಮತ್ತು ಕಲಿಸುವುದೇ ಜೀವನದ ದೊಡ್ಡ ಗುರಿಯಾಗಬೇಕು. ಈ ಮೂಲಕ ದೇಶದ ಅಭಿವೃದ್ಧಿಯ ಬಾಗಿಲು ತೆರೆಯಬೇಕು ಎಂದು ಹೇಳಿದರು.

ಫೌಂಡೇಶನ್ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ ಮಾತನಾಡಿ, ಶಾಲೆಗಳಲ್ಲಿ ರೋಬೋಟಿಕ್ ಶಿಕ್ಷಕರ ಪ್ರವೇಶವಾಗುತ್ತಿದೆ. ಬೆಂಗಳೂರಿನ ಎರಡು ಪ್ರತಿಷ್ಠಿತ ಸಂಸ್ಥೆಗಳಲ್ಲಿ 2019ರಲ್ಲೇ ಪ್ರಾಯೋಗಿಕವಾಗಿ ರೋಬೋಟಿಕ್ ಶಿಕ್ಷಕರ ಮೂಲಕ ಕಲಿಕೆ ನಡೆಸಲಾಗಿತ್ತು. ಆದರೆ ಶಿಕ್ಷಣ ತಜ್ಞರ ವರದಿ ಪ್ರಕಾರ ಯಂತ್ರಗಳು ಚಲಿಸಬಲ್ಲವು; ಮನುಷ್ಯನಷ್ಟು ಪರಿಣಾಮಕಾರಿಯಾಗಿ ಬೋಧಿಸಲು ಸಾಧ್ಯವಿಲ್ಲ. ತರಗತಿಯಲ್ಲಿ ಶಿಕ್ಷಕರ ಭೌತಿಕ ಉಪಸ್ಥಿತಿ ಬಹಳ ಮುಖ್ಯ ಎಂದರು.

ಮಕ್ಕಳಿಗೆ ಮೊದಲು ಪುಸ್ತಕ ಓದುವ ಅಭ್ಯಾಸ ಬೆಳೆಸಬೇಕು. ಪುಸ್ತಕಗಳ ಬಗ್ಗೆ ಇರುವ ಮನೋಭಾವ ಬದಲಿಸಿ ಓದುವ ಹವ್ಯಾಸ ಬೆಳೆಸಿದರೆ ಮಗು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಫೌಂಡೇಶನ್ ನಿರ್ದೇಶಕ ಈ. ರುದ್ರಮುನಿ ಮಾತನಾಡಿ, ಶಿಕ್ಷಣದಲ್ಲಿ ಪ್ರಾಥಮಿಕ ಹಂತ ಬಹಳ ಮುಖ್ಯ. ಸರ್ಕಾರ ಉನ್ನತ ಶಿಕ್ಷಣಕ್ಕೆ ನೀಡುವ ಆದ್ಯತೆಯನ್ನೇ ಪ್ರಾಥಮಿಕ ಶಿಕ್ಷಣಕ್ಕೂ ನೀಡಬೇಕು. ತಳಪಾಯ ಗಟ್ಟಿಯಾಗಿದ್ದರೆ ಮಾತ್ರ ಕಟ್ಟಡ ಸದೃಢವಾಗಿರುತ್ತದೆ. ಹೀಗಾಗಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.

2026–27ನೇ ಸಾಲಿನ ‘ವಿಜ್ಞಾನ ರತ್ನ’ ಪ್ರಶಸ್ತಿಯನ್ನು ಜಿಲ್ಲೆಯ ಆರು ವಿಜ್ಞಾನ ಶಿಕ್ಷಕರಿಗೆ ಪ್ರದಾನ ಮಾಡಲಾಯಿತು.
ಚಿತ್ರದುರ್ಗ ತಾಲ್ಲೂಕಿನ ಚವಲಿಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಪ್ರೌಢಶಾಲೆಯ ಸಿ.ಜಿ. ಹಾಲೇಶ್, ಹಿರಿಯೂರು ತಾಲ್ಲೂಕಿನ ಪಾಲವ್ವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಟಿ.ಜೆ. ವೆಂಕಟೇಶ್, ಹೊಸದುರ್ಗ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಬಿ.ಕೆ. ಪ್ರಮೀಳಾ, ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಶರಣಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಸೈಯದ್ ಸಾದಿಕ್ ಬಾಷಾ, ಮೊಳಕಾಲ್ಮೂರು ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್.ಕೆ. ವಿರೂಪಾಕ್ಷ ಹಾಗೂ ಚಳ್ಳಕೆರೆ ತಾಲ್ಲೂಕಿನ ದೇವರೆಡ್ಡಿಹಳ್ಳಿ ಗ್ರಾಮಾಂತರ ಪ್ರೌಢಶಾಲೆಯ ಬಿ.ಎ. ಮಮತಾದೇವಿ ಪ್ರಶಸ್ತಿಗೆ ಭಾಜನರಾದರು.

ಸಂಸ್ಥೆ ಕಾರ್ಯದರ್ಶಿ ಕೆ.ಎಂ.ವೀರೇಶ್ , ಪ್ರಾಂಶುಪಾಲೆ ಎಂ.ಆರ್.ಜಯಲಕ್ಷ್ಮಿ, ನಿವೃತ್ತ ಪ್ರಾಂಶುಪಾಲ ಪ್ರೊ.ಟಿ.ಎಚ್.ಕೃಷ್ಣ ಮೂರ್ತಿ, ಫೌಂಡೇಶನ್ ಖಜಾಂಚಿ ಕೆ.ವಿ.ನಾಗಲಿಂಗರೆಡ್ಡಿ, ಕಾರ್ಯದರ್ಶಿ ಎಚ್. ಎಸ್.ಟಿ.ಸ್ವಾಮಿ ಉಪಸ್ಥಿತರಿದ್ದರು

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now