ದೆಹಲಿ.ಸೆಪ್ಟೆಂಬರ್.07: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನಮಂತ್ರಿ ಜನ್ ಧನ್ ಯೋಜನೆ’ಯ (PMJDY) ಒಟ್ಟು ಖಾತೆಗಳಲ್ಲಿ ಪ್ರತಿ ನಾಲ್ಕರಲ್ಲಿ ಒಂದು ಖಾತೆ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಸುಮಾರು 5.72 ಕೋಟಿ ಖಾತೆಗಳಲ್ಲಿ ನಯಾಪೈಸೆಯೂ ಇಲ್ಲದೆ ಶೂನ್ಯ ಬ್ಯಾಲೆನ್ಸ್ (Zero Balance) ಉಳಿದಿದೆ ಎಂಬ ಆಘಾತಕಾರಿ ಅಂಶ ಮಾಹಿತಿ ಹಕ್ಕು (RTI) ಕಾಯ್ದೆಯಡಿ ಬಹಿರಂಗವಾಗಿದೆ.
ಆರ್ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ ನೀಡಿರುವ ಉತ್ತರದಲ್ಲಿ ಈ ಅಂಕಿ-ಅಂಶಗಳು ಲಭ್ಯವಾಗಿವೆ.

3.15 ಲಕ್ಷ ಕೋಟಿ ರೂ. ಠೇವಣಿ

ದೇಶಾದ್ಯಂತ ಒಟ್ಟು 59,03,74,907 (ಸುಮಾರು 59 ಕೋಟಿಗೂ ಹೆಚ್ಚು) ಜನ್ ಧನ್ ಖಾತೆಗಳಿದ್ದು, ಇವುಗಳಲ್ಲಿ ಒಟ್ಟಾರೆಯಾಗಿ 3,15,179.90 ಕೋಟಿ ರೂಪಾಯಿ ಬ್ಯಾಲೆನ್ಸ್ ಇದೆ. ಒಟ್ಟು ಖಾತೆದಾರರಲ್ಲಿ ಮಹಿಳೆಯರೇ (ತೃತೀಯಲಿಂಗಿಗಳು ಸೇರಿದಂತೆ) ಮುಂಚೂಣಿಯಲ್ಲಿದ್ದು, ಮಹಿಳೆಯರ ಹೆಸರಿನಲ್ಲಿ 32.89 ಕೋಟಿ ಖಾತೆಗಳಿದ್ದರೆ, ಪುರುಷರ ಹೆಸರಿನಲ್ಲಿ 26.14 ಕೋಟಿ ಖಾತೆಗಳಿವೆ.
ಆದರೆ, ಒಟ್ಟು ಖಾತೆಗಳ ಪೈಕಿ 15,36,77,009 (15.36 ಕೋಟಿಗೂ ಅಧಿಕ) ಖಾತೆಗಳು ಯಾವುದೇ ವಹಿವಾಟು ಇಲ್ಲದೆ ನಿಷ್ಕ್ರಿಯವಾಗಿವೆ (Inoperative). ಇನ್ನುಳಿದಂತೆ 5,72,35,490 ಖಾತೆಗಳಲ್ಲಿ ಯಾವುದೇ ಹಣವಿಲ್ಲದೆ ‘ಶೂನ್ಯ ಬ್ಯಾಲೆನ್ಸ್’ ಉಳಿದಿದೆ.
ಉತ್ತರ ಪ್ರದೇಶದಲ್ಲೇ ಹೆಚ್ಚು ನಿಷ್ಕ್ರಿಯ ಖಾತೆಗಳು
ರಾಜ್ಯವಾರು ಅಂಕಿ-ಅಂಶಗಳನ್ನು ಗಮನಿಸಿದರೆ, ಅತಿ ಹೆಚ್ಚು ಖಾತೆಗಳು, ನಿಷ್ಕ್ರಿಯ ಖಾತೆಗಳು ಹಾಗೂ ಶೂನ್ಯ ಬ್ಯಾಲೆನ್ಸ್ ಖಾತೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ:
ಶೂನ್ಯ ಬ್ಯಾಲೆನ್ಸ್ ಖಾತೆಗಳು: ಉತ್ತರ ಪ್ರದೇಶ (95.92 ಲಕ್ಷ), ಬಿಹಾರ (62.35 ಲಕ್ಷ), ಪಶ್ಚಿಮ ಬಂಗಾಳ (37.20 ಲಕ್ಷ), ಅಸ್ಸಾಂ (36.30 ಲಕ್ಷ) ಮತ್ತು ಮಹಾರಾಷ್ಟ್ರ (36.04 ಲಕ್ಷ).
ನಿಷ್ಕ್ರಿಯ ಖಾತೆಗಳು: ಉತ್ತರ ಪ್ರದೇಶ (3.23 ಕೋಟಿ), ಬಿಹಾರ (1.59 ಕೋಟಿ), ಮಧ್ಯಪ್ರದೇಶ (1.35 ಕೋಟಿ), ಪಶ್ಚಿಮ ಬಂಗಾಳ (1.02 ಕೋಟಿ) ಮತ್ತು ಮಹಾರಾಷ್ಟ್ರ (97.94 ಲಕ್ಷ).
ಒಟ್ಟು ಖಾತೆಗಳ ಸಂಖ್ಯೆ: ಉತ್ತರ ಪ್ರದೇಶ (10.51 ಕೋಟಿ), ಬಿಹಾರ (7.01 ಕೋಟಿ), ಪಶ್ಚಿಮ ಬಂಗಾಳ (5.73 ಕೋಟಿ), ರಾಜಸ್ಥಾನ (3.87 ಕೋಟಿ) ಮತ್ತು ಮಹಾರಾಷ್ಟ್ರ (3.85 ಕೋಟಿ).
ಕೇಂದ್ರದ ಬಳಿ ಇಲ್ಲ ಸಂಪೂರ್ಣ ವಿವರ
ಆರ್ಟಿಐ ಅರ್ಜಿಯ ಪ್ರಕಾರ, ನಿಷ್ಕ್ರಿಯಗೊಂಡ ಅಥವಾ ಶೂನ್ಯ ಬ್ಯಾಲೆನ್ಸ್ ಹೊಂದಿರುವ ಖಾತೆಗಳಲ್ಲಿ ಲಿಂಗವಾರು (ಪುರುಷ-ಮಹಿಳೆ) ವರ್ಗೀಕರಣದ ಮಾಹಿತಿ ಕೇಂದ್ರ ಮಟ್ಟದಲ್ಲಿ ಲಭ್ಯವಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಜೊತೆಗೆ, 100 ರೂಪಾಯಿಗಿಂತ ಕಡಿಮೆ ಬ್ಯಾಲೆನ್ಸ್ ಇರುವ ಖಾತೆಗಳು, ಕಳೆದ ಐದು ವರ್ಷಗಳಲ್ಲಿ ಮುಚ್ಚಲಾದ ಖಾತೆಗಳು ಹಾಗೂ ಸೈಬರ್ ವಂಚನೆ ಅಥವಾ ಸಂಶಯಾಸ್ಪದ ವಹಿವಾಟಿನ ಕಾರಣಕ್ಕಾಗಿ ಸ್ಥಗಿತಗೊಳಿಸಲಾದ (ಫ್ರೀಜ್ ಆದ) ಖಾತೆಗಳ ಮಾಹಿತಿಯನ್ನು ಕೇಂದ್ರವು ಪ್ರತ್ಯೇಕವಾಗಿ ನಿರ್ವಹಿಸುತ್ತಿಲ್ಲ ಎಂದು ತಿಳಿಸಿದೆ.
ದೇಶದ ಪ್ರತಿಯೊಂದು ಕುಟುಂಬಕ್ಕೂ ಬ್ಯಾಂಕಿಂಗ್ ಸೌಲಭ್ಯ, ಆರ್ಥಿಕ ಸಾಕ್ಷರತೆ ಮತ್ತು ಸಾಮಾಜಿಕ ಭದ್ರತೆ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2014ರ ಆಗಸ್ಟ್ನಲ್ಲಿ ಜನ್ ಧನ್ ಯೋಜನೆಯನ್ನು ಆರಂಭಿಸಿತ್ತು.












