ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 22 : ರಾಷ್ಟ್ರೀಯ ಹೆದ್ದಾರಿ 50 ರ ಮಲ್ಲಾಪುರ ರಿಂಗ್ ರೋಡ್ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಸೇರಿ ಮೂವರು ಮೃತಪಟ್ಟಿದ್ದು, 35ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಂಗಾವತಿಯಿಂದ ಹೊಸಪೇಟೆ ಮಾರ್ಗವಾಗಿ ಚಿತ್ರದುರ್ಗಕ್ಕೆ ಬರುತ್ತಿದ್ದ ಮಧುಗಿರಿ ಡಿಪೋಗೆ ಸೇರಿದ ಕೆಎ-64-ಎಫ್-0001 ನೋಂದಣಿ ಸಂಖ್ಯೆಯ ಸಾರಿಗೆ ಬಸ್ಸು, ಮಧ್ಯಾಹ್ನ ಸುಮಾರು 1:00 ಗಂಟೆಯ ವೇಳೆಗೆ ಮಲ್ಲಾಪುರ ರಿಂಗ್ ರಸ್ತೆಯ ಬಳಿ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬಸ್ಸಿನ ಮುಂಭಾಗದಲ್ಲಿ ವೇಗವಾಗಿ ಚಲಿಸುತ್ತಿದ್ದ ಲಾರಿಯೊಂದರ ಚಾಲಕ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಪರಿಣಾಮವಾಗಿ, ನಿಯಂತ್ರಣ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಬಸ್ ಲಾರಿಯ ಹಿಂಭಾಗಕ್ಕೆ ರಭಸವಾಗಿ ಅಪ್ಪಳಿಸಿದೆ.
ಡಿಕ್ಕಿಯ ತೀವ್ರತೆಗೆ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡ ಬಸ್ ಚಾಲಕ ತುಮಕೂರು ಜಿಲ್ಲೆಯ ಮಧುಗಿರಿ ಡಿಪೋದ ಬಾಪೂಗೌಡ ಪಾಟೀಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿದ್ದ ಕೂಡ್ಲಿಗಿ ಮೂಲದ ಗಗನ್ ಹಾಗೂ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಚಿಕ್ಕ ಆದಾಪುರದ ನಿವಾಸಿ ಗೋವಿಂದಗೌಡ ಹನುಮಗೌಡ್ರ ಎಂಬುವವರು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ದೂರುದಾರ ಸಂದೀಪ್, ಅವರ ತಾಯಿ ಲತಾ, ಪ್ರಯಾಣಿಕರಾದ ರಾಜುನಾಯ್ಕ, ಶಿವಾನಂದ ಸೇರಿದಂತೆ ಸುಮಾರು 35 ಮಂದಿಯನ್ನು ಸ್ಥಳೀಯರು ಮತ್ತು ಮಾರ್ಗಹೋಕರು ತಕ್ಷಣ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಲಾರಿಯ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಗಾಯಾಳು ಸಂದೀಪ್ ನೀಡಿದ ದೂರಿನ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಮತಿ ರುಕ್ಕಮ್ಮ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಲಾರಿ ಚಾಲಕನ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.










