ಪಲ್ನಾಡು.ಸೆಪ್ಟೆಂಬರ್.07: ತೀವ್ರ ಎದೆನೋವು ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರ ಹೊಟ್ಟೆಯಿಂದ ಬರೋಬ್ಬರಿ 14 ಪೆನ್ನುಗಳು, 5 ಮರದ ಚಮಚಗಳು ಹಾಗೂ ಒಂದು ಮೇಣದಬತ್ತಿಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನರಸರಾವ್ ಪೇಟೆ ಮಂಡಲದ ಪೆಟ್ಲೂರಿವಾರಿಪಾಲೆಂ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದ 33 ವರ್ಷದ ಮಹಿಳೆಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ವಿವಿಧ ತಪಾಸಣೆಗಳನ್ನು ನಡೆಸಿದಾಗ ಆಕೆಯ ಹೊಟ್ಟೆಯಲ್ಲಿ ಅಪಾಯಕಾರಿ ವಸ್ತುಗಳು ಇರುವುದು ಪತ್ತೆಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರ ತಂಡ, ಲ್ಯಾಪರೊಸ್ಕೋಪಿ ವಿಧಾನದ ಮೂಲಕ ಹೊಟ್ಟೆಗೆ ಸಣ್ಣ ರಂಧ್ರ ಕೊರೆದು 14 ಪೆನ್ನುಗಳು, 5 ಮರದ ಚಮಚಗಳು ಹಾಗೂ ಒಂದು ಮೇಣದಬತ್ತಿಯನ್ನು ಹೊರತೆಗೆದಿದೆ. ಮಹಿಳೆ ನುಂಗಿದ್ದ ಒಂದು ಪೆನ್ನಿನ ಮುಚ್ಚಳ ತೆರೆದಿದ್ದರಿಂದ ಅದು ಹೊಟ್ಟೆಯ ಒಳಭಾಗಕ್ಕೆ ಚುಚ್ಚಿ ತೀವ್ರ ನೋವು ಉಂಟಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ನುಂಗಲು ಮಾನಸಿಕ ಅಸ್ವಸ್ಥತೆಯೇ ಕಾರಣ
ಮಹಿಳೆ ಇಷ್ಟೊಂದು ಅಪಾಯಕಾರಿ ವಸ್ತುಗಳನ್ನು ನುಂಗಲು ಆಕೆಯ ಮಾನಸಿಕ ಸ್ಥಿತಿಯೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. “ಮಗಳು ಕಳೆದ 10 ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಸುಮಾರು ಎರಡು ತಿಂಗಳ ಹಿಂದಷ್ಟೇ ಆಕೆಯ ಪತಿ ವಿಚ್ಛೇದನ ನೀಡಿದ್ದ,” ಎಂದು ಮಹಿಳೆಯ ತಂದೆ ನೋಮುಲ ಹನುಮಂತರಾವ್ ನೋವು ತೋಡಿಕೊಂಡಿದ್ದಾರೆ. ಸದ್ಯ ಶಸ್ತ್ರಚಿಕಿತ್ಸೆ ಮುಗಿದಿದ್ದು, ಮಹಿಳೆ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದೇ ವರ್ಷದ ಜನವರಿಯಲ್ಲಿ ಗುಂಟೂರಿನಲ್ಲೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಮೂರು ವರ್ಷಗಳ ಹಿಂದೆ ಕೇವಲ 50 ರೂಪಾಯಿ ಬಾಜಿ ಕಟ್ಟಿ ಪೆನ್ನು ನುಂಗಿದ್ದ ಬಾಲಕನೊಬ್ಬ, ಇತ್ತೀಚೆಗೆ ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆ ಸೇರಿದ್ದ. ಪೋಷಕರಿಗೆ ಹೆದರಿ ಮೂರು ವರ್ಷ ವಿಷಯ ಮುಚ್ಚಿಟ್ಟಿದ್ದ ಆತನಿಗೆ, ಗುಂಟೂರು ಜಿಜಿಎಚ್ ಆಸ್ಪತ್ರೆ ವೈದ್ಯರು ‘ರೆಟ್ರೋಗ್ರೇಡ್ ಎಂಟರೊಸ್ಕೋಪಿ ವಿತ್ ಓವರ್ ಟ್ಯೂಬ್’ ವಿಧಾನದ ಮೂಲಕ ದೊಡ್ಡ ಕರುಳಿನಲ್ಲಿ ಸಿಲುಕಿದ್ದ ಪೆನ್ನನ್ನು ಯಾವುದೇ ತೊಂದರೆಯಾಗದಂತೆ ಹೊರತೆಗೆದು ಪ್ರಾಣಾಪಾಯದಿಂದ ಪಾರುಮಾಡಿದ್ದರು.










