Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರು | ಬಿಜೆಪಿ ಮಂಡಲ ಅಧ್ಯಕ್ಷರ 4 ವರ್ಷದ ಪುತ್ರ ದಿಢೀರ್ ಸಾವು

---Advertisement---

ಸುದ್ದಿಒನ್, ಹಿರಿಯೂರು, ಜೂನ್‌. 17 : ತಾಲೂಕಿನ ಬಿಜೆಪಿ ಮಂಡಲ ಅಧ್ಯಕ್ಷ ಕೆ. ಅಭಿನಂದನ್ ಅವರ 4 ವರ್ಷದ ಸುಪುತ್ರ ವೈಷ್ಣವ್, ಮಂಗಳವಾರ ತಡರಾತ್ರಿ ದಿಢೀರ್ ಸುಸ್ತಾಗಿ ಮೃತಪಟ್ಟಿದ್ದು, ಇಂದು ಮೃತರ ಸ್ವಗ್ರಾಮದ ತೋಟದ ಜಮೀನಿನಲ್ಲಿ ಬಾಲಕನ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಂಗಳವಾರ ತಡರಾತ್ರಿ ಮಲಗುವ ಮುನ್ನ ಬಾಲಕ ವೈಷ್ಣವ್ ತನ್ನ ತಂದೆಯ ಜೊತೆ ಆಡಿದ ಕೊನೆಯ ಮಾತುಗಳು ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸುವಂತಿವೆ. ಮಲಗುವ ಮುನ್ನ ತಂದೆಯ ಬಳಿ ಬಂದ ವೈಷ್ಣವ್, ಐ ಲವ್ ಯು ಅಪ್ಪ, ನೀನು ಬರೀ ಪಕ್ಷ ಅದು ಇದು ಅಂತ ಹೋಗ್ತಿಯಾ ಏನಪ್ಪಾ ನೀನು? ಎಂದು ತಂದೆಗೆ ಹೇಳಿ ಮಲಗಿದ್ದಾನೆ.

ಅದಾದ ಬಳಿಕ ಸ್ವಲ್ಪ ಸಮಯದ ನಂತರ ಎಚ್ಚರಗೊಂಡು, ಅಪ್ಪ ತಂಗಿ ಅಳ್ತಾ ಇದ್ದಾಳೆ ನೋಡು ಎಂದು ಹೇಳಿ ಮತ್ತೆ ಮಲಗಿದ್ದಾನೆ. ಮತ್ತಷ್ಟು ಸಮಯದ ನಂತರ ಎದ್ದು ನೀರು ಕೇಳಿ, ಬಾಟಲಿಯಿಂದ ನೀರು ಕುಡಿದು ಮಲಗಿದ್ದಾನೆ. ಆದರೆ, ಕೇವಲ ಎರಡರಿಂದ ಮೂರು ನಿಮಿಷಗಳ ನಂತರ ತಂದೆ ಅಭಿನಂದನ್ ಅವರು ಗಮನಿಸಿದಾಗ ಮಗ ಮಾತನಾಡಲಿಲ್ಲ ಎಂದು ತಿಳಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಮುದ್ದಾದ ಮಗನನ್ನು ಕಳೆದುಕೊಂಡ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿಯುತ್ತಿದ್ದಂತೆ ನೂರಾರು ಕಾರ್ಯಕರ್ತರು ಹಾಗೂ ಗಣ್ಯರು ಅಭಿನಂದನ್ ಅವರ ನಿವಾಸಕ್ಕೆ ಧಾವಿಸಿ ಸಾಂತ್ವನ ಹೇಳಿದ್ದಾರೆ.
ಮಾಜಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಎಂ. ರವೀಂದ್ರಪ್ಪ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಜಯಣ್ಣ, ಮುಖಂಡರಾದ ಎನ್.ಆರ್. ಲಕ್ಷ್ಮೀಕಾಂತ್, ಮಾಜಿ ಶಾಸಕ ತಿಪ್ಪಾರೆಡ್ಡಿ, ಬಿಜೆಪಿ ಮುಖಂಡ ಸಿದ್ಧಾರ್ಥ್ ಸೇರಿದಂತೆ ಹಲವು ರಾಜಕೀಯ ಮುಖಂಡರು, ಸಾವಿರಾರು ಸಾರ್ವಜನಿಕರು, ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.

Join WhatsApp

Join Now

Join Telegram

Join Now