ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 21 : ನಿರಾಶ್ರಿತರು, ವಯಸ್ಸಾದವರನ್ನು ಆರೈಕೆ ಮಾಡುವುದು ಪುಣ್ಯದ ಕೆಲಸ. ಮಕ್ಕಳು ಹೆತ್ತ ತಂದೆ-ತಾಯಿಗಳನ್ನು ನಿರ್ಲಕ್ಷ್ಯ ಮಾಡಬಾರದೆಂದು ನಗರಸಭೆ ಅಧ್ಯಕ್ಷೆ ಸುಮಿತಾ ತಿಳಿಸಿದರು.
ಕೆಳಗೋಟೆ ಮುನ್ಸಿಪಲ್ ಕಾಂಪ್ಲೆಕ್ಸ್ನಲ್ಲಿರುವ ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ನಿರಾಶ್ರಿತರ ಆಶ್ರಯ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಗಾಟಿಸಿ ಮಾತನಾಡಿದರು.
ಕೆಲವರು ಮನೆಯಲ್ಲಿ ಮನಸ್ತಾಪ ಮಾಡಿಕೊಂಡು ಹೊರಗೆ ಬಂದು ನಿರಾಶ್ರಿತರಂತೆ ಇರಬಹುದು. ಇನ್ನು ಕೆಲವರು ಯಾರು ಇಲ್ಲದೆ ನಿರಾಶ್ರಿತರಾಗಿರಬಹುದು. ಅಂತಹವರನ್ನು ಗುರುತಿಸಿ ಕರೆ ತಂದು ಇಲ್ಲಿ ಆಶ್ರಯ ನೀಡಲಾಗುವುದು. ನಗರಸಭೆಯಿಂದ ಅಗತ್ಯ ಸಹಕಾರ ಕೊಡುವುದಾಗಿ ಭರವಸೆ ನೀಡಿದರು.
ಕೌಶಲ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಹತೀಕ್ ರೆಹಮಾನ್ ಮಾತನಾಡಿ 2013 ರಲ್ಲಿ ನವದೆಹಲಿಯಲ್ಲಿ ಚಳಿಗೆ 150 ನಿರ್ಗತಿಕರು ಮೃತಪಟ್ಟಾಗ ಸುಪ್ರೀಂಕೋರ್ಟ್ ಯಾವುದೇ ಕಾರಣಕ್ಕೂ ನಿರಾಶ್ರಿತರು ಊಟ ವಸತಿಯಿಲ್ಲದೆ ಸಾಯಬಾರದೆಂದು ಸರ್ಕಾರಕ್ಕೆ ಸೂಚಿಸಿದಾಗ ಅಂದಿನಿಂದ ಆಶ್ರಯ ಕೇಂದ್ರ ತೆರೆಯಲಾಗಿದೆ. ಕೇಂದ್ರ ಸರ್ಕಾರ 60 ಪರ್ಸೆಂಟ್, ರಾಜ್ಯ ಸರ್ಕಾರ ನಲವತ್ತು ಪರ್ಸೆಂಟ್ ನೆರವು ನೀಡುತ್ತದೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಆಸ್ಪತ್ರೆ, ಬಸ್ನಿಲ್ದಾಣ, ರೈಲು ನಿಲ್ದಾಣ, ಎ.ಪಿ.ಎಂ.ಸಿ. ಇನ್ನು ಮುಂತಾದ ಕಡೆ ಸರ್ವೆ ಮಾಡಿ ನಿರಾಶ್ರಿತರು ಕಂಡು ಬಂದಲ್ಲಿ ಕರೆತಂದು ಕೌನ್ಸಿಲಿಂಗ್ ನಡೆಸಿ ತಾತ್ಕಾಲಿಕವಾಗಿ ಆಶ್ರಯ ನೀಡಿ ನಂತರ ವಾರಸುದಾರರಿಗೆ ಒಪ್ಪಿಸಲಾಗುವುದು.
ಆಪ್ತ ಸಮಾಲೋಚನೆ ನಡೆಸಿ ಸ್ವಯಂ ಉದ್ಯೋಗ ತರಬೇತಿಯನ್ನು ನೀಡಲಾಗುವುದು. ಇದರಿಂದ ಸ್ವಾವಲಂಭಿಯಾಗಿ ಜೀವನ ಮಾಡಲು ಸಹಕಾರಿಯಾಗಲಿದೆ ಎಂದರು.
ಆರೋಗ್ಯ ಇಲಾಖೆಯ ಶ್ರೀನಿವಾಸ್ ಮಾತನಾಡುತ್ತ ಮನ ನೊಂದು ಮನೆಯಿಂದ ಹೊರ ಬಂದು ನಿರಾಶ್ರಿತರಂತೆ ಕೆಲವರು ಬೀದಿಯಲ್ಲಿರುತ್ತಾರೆ. ನಾಗರೀಕ ಸಮಾಜದಲ್ಲಿ ಎಲ್ಲರನ್ನು ಗೌರವದಿಂದ ಕಾಣಬೇಕು. ಜೀವನ ಕ್ರಮ, ಆಹಾರ ಪದ್ದತಿ, ಒತ್ತಡದಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ ಕಾಡುವುದು ಸಹಜ. ಕೆಲವೊಮ್ಮ ನಿಂದನೆಗಳನ್ನು ಸಹಿಸಿಕೊಂಡು ಹೊಂದಾಣಿಕೆಯಿಂದ ಜೀವಿಸಿದಾಗ ಯಾವ ಸಮಸ್ಯೆಯೂ ಎದುರಾಗುವುದಿಲ್ಲವೆಂದರು.
ಲೇಖಕ ಹೆಚ್.ಆನಂದ್ಕುಮಾರ್ ಮಾತನಾಡಿ ಸರ್ಕಾರದಿಂದ ನಾನಾ ರೀತಿಯ ಸೌಲಭ್ಯಗಳಿವೆ. ಎಲ್ಲವನ್ನು ಬಳಸಿಕೊಳ್ಳುವ ಜ್ಞಾನವಿರಬೇಕು. ಡಾ.ಬಿ.ಆರ್.ಅಂಬೇಡ್ಕರ್ರವರು ಕೊಟ್ಟಿರುವ ಸಂವಿಧಾನದಡಿ ಕಟ್ಟ ಕಡೆಯ ಮನುಷ್ಯನು ಸ್ವಾಭಿಮಾನದಿಂದ ಬದುಕಬೇಕು. ಜೀವನವೆಂದರೆ ಕಷ್ಟ ಕಾರ್ಪಣ್ಯದ ಅಂಗಳವಿದ್ದಂತೆ. ಎಲ್ಲರೂ ಸಮಾಜಮುಖಿ ಕೆಲಸಗಳತ್ತ ಸಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನೇಕ ಮಹಾತ್ವಾಕಾಂಕ್ಷಿ ಯೋಜನೆಗಳಿವೆ. ಸೌಲಭ್ಯಗಳನ್ನು ಪಡೆದುಕೊಳ್ಳಬೇಕಷ್ಟೆ ಎಂದು ಹೇಳಿದರು.
ಡಾ.ಎಸ್.ಪವಿತ್ರ ನಿರಾಶ್ರಿತರ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಿದರು.
ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಚಿದಾನಂದಮೂರ್ತಿ, ತಿಪ್ಪಣ್ಣ, ಸೂರ್ಯನಾರಾಯಣ, ನ್ಯಾಯವಾದಿ ಮಾದವಿ, ಕವಿತ ಇವರುಗಳು ಆರೋಗ್ಯ ತಪಾಸಣಾ ಶಿಬಿರದಲ್ಲಿ ಉಪಸ್ಥಿತರಿದ್ದರು.




















