ಬೆಂಗಳೂರು: ನಿನ್ನೆಯಷ್ಟೇ ಡಾ.ರಾಜ್‍ಕುಮಾರ್ ಅವರ 97ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದ ನಡುವೆ ನಟ ಚೇತನ್ ಅಹಿಂಸಾ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದರು. ರಾಜ್‍ಕುಮಾರ್ ಸಮಾಧಿಗೆ 2.5 ಎಕರೆ ಜಾಗವನ್ನ ಕೊಡಬೇಕಿತ್ತಾ ಅಂತ ಹೇಳುವ ಮೂಲಕ ವಿವಾದ ಸೃಷ್ಟಿ ಮಾಡಿದ್ದರು. ಇದಾದ ಬಳಿಕ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಇದೀಗ ಅಣ್ಣಾವ್ರ ಅಭಿಮಾನಿಗಳ ಹಠಕ್ಕೆ ಮಣಿದು, ಚೇತನ್ ಅಹಿಂಸಾ ಕ್ಷಮೆ ಯಾಚಿಸಿದ್ದಾರೆ.
ಡಾ.ರಾಜ್‍ಕುಮಾರ್ ಸಂಘದ ಅಧ್ಯಕ್ಷರಾಗಿದ್ದ ಸಾರಾ ಗೋವಿಂದು ಅವರು ಈ ಬಗ್ಗೆ ಮಾತನ್ನಾಡಿದ್ದರು. ಚೇತನ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿರುವ ಜೊತೆಗೆ ಚೇತನ್ ಅವರಿಗೆ ನೇರವಾಗಿ, ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಈ ಬಾರಿ ಚೇತನ್ ಗೆ ಒದೆ ಬೀಳುವುದು ಗ್ಯಾರಂಟಿ ಎಂಬ ಮಾತನ್ನ ಹೇಳಿದ್ದರು. ಕ್ಷಮೆ ಕೇಳುವುದಕ್ಕೂ ಸಹ ಅವನಿಗೆ ಯೋಗ್ಯತೆ ಇಲ್ಲ. ಕರ್ನಾಟಕಕ್ಕೆ ಅವನ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ಅವನು ಎಷ್ಟು ಸಿನಿಮಾ ಮಾಡಿದ್ದಾನೆ. ತಿರ್ಕೊಂಡು ತಿಂತಿದ್ದಾನೆ. ಹಾದಿ ಬೀದಿಯಲ್ಲು ಬೇಡಿಕೊಂಡು ತಿಂತಿದ್ದೀಯಾ. ನೀನು ಮೇರು ನಟರ ಬಗ್ಗೆ ಮಾತನ್ನಾಡುತ್ತೀಯ. ಆತನೊಬ್ಬ ನಿರುದ್ಯೋಗಿ. ಕೈಯಲ್ಲಿ ಮಾಡುವುದಕ್ಕೆ ಕೆಲಸ ಇಲ್ಲ. ಮೊದಲು ಕೆಲಸ ಹುಡುಕಿಕೋ. ನಾವೂ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಆತನನ್ನು ಈ ಕೂಡಲೇ ರಾಜ್ಯದಿಂದ ಹೊರಗೆ ಹಾಕಬೇಕು. ಅಣ್ಣಾವ್ರ ಸ್ಮಾರಕದ ಜಾಗ ನಮಗೆಲ್ಲ ದೇವಸ್ಥಾನ. ಸ್ಮಾರಕವನ್ನು ಕಾಂಪ್ಲೆಕ್ಸ್ ಅಂತಿಯಲ್ಲ ಅಲ್ಲಿ ಯಾವ ಕಮರ್ಷಿಯಲ್ ಆಕ್ಟಿವಿಟೀಸ್ ನಡೆಯುತ್ತಿದೆ ಎಂದು ಸಾರಾ ಗೋವಿಂದು ಪ್ರಶ್ನೆ ಮಾಡಿದ್ದಾರೆ. ಅಭಿಮಾನಿಗಳ ಒತ್ತಡ ಜಾಸ್ತಿಯಾದ ಬೆನ್ನಲ್ಲೇ ಚೇತನ್ ಅಹಿಂಸಾ ಕ್ಷಮೆ ಕೇಳಿದ್ದಾರೆ.


















