ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಚಳ್ಳಕೆರೆ ತಾಲೂಕಿನ ಬೊಂಬೇರಹಳ್ಳಿ ಗ್ರಾಮದ ರೈತ ಮುಖಂಡ ಕೆ. ಚಿಕ್ಕಣ್ಣ ಅವರು ಸಮಗ್ರ ಕೃಷಿ ಪದ್ಧತಿಯಲ್ಲಿ ಬೇಸಿಗೆಯಲ್ಲೇ 134 ಕ್ವಿಂಟಲ್ ರಾಗಿ ಇಳುವರಿ ಪಡೆದು ಗಮನ ಸೆಳೆದಿದ್ದಾರೆ. ಸಾವಯವ ವಿಧಾನವನ್ನು ಅನುಸರಿಸಿ 6 ಎಕರೆ ನೀರಾವರಿ ಜಮೀನಿನಲ್ಲಿ ರಾಗಿ ಬೆಳೆದಿರುವ ಅವರು, ಯಾವುದೇ ರಾಸಾಯನಿಕ ಔಷಧ ಅಥವಾ ರಸಗೊಬ್ಬರ ಬಳಸದೆ ಉತ್ತಮ ಫಲಿತಾಂಶ ಗಳಿಸಿದ್ದಾರೆ.

ಸುಮಾರು 26 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಕೈಗೊಂಡಿರುವ ಚಿಕ್ಕಣ್ಣ ಅವರು, 6 ಎಕರೆ ರಾಗಿ, 16 ಎಕರೆ ಮೆಕ್ಕೆಜೋಳ ಹಾಗೂ 5 ಎಕರೆ ದಾಳಿಂಬೆ ಬೆಳೆ ಬೆಳೆದಿದ್ದಾರೆ. ರಾಗಿ ಬೆಳೆಗೆ 40 ಲೋಡ್ ಕೊಟ್ಟಿಗೆ ಗೊಬ್ಬರ ಬಳಸಿದ್ದು, ಇದರ ಫಲವಾಗಿ ಎಕರೆಗೆ ಸರಾಸರಿ 20 ಕ್ವಿಂಟಲ್ ಇಳುವರಿ ದೊರೆತಿದೆ.ಇವರ ಬಳಿ 60 ಹಸುಗಳು ಹಾಗೂ 30 ಎಮ್ಮೆಗಳು ಇರುವುದರಿಂದ ಸಾಕಷ್ಟು ಸಗಣಿ ಗೊಬ್ಬರ ಲಭ್ಯವಾಗುತ್ತಿದೆ. ಇದೇ ಜಮೀನಿನಲ್ಲಿ ಮುಂಚಿತವಾಗಿ ಹೊಂಗೆ ಸೊಪ್ಪು ಬಳಸಿ ಭತ್ತ ಬೆಳೆದಿದ್ದು, ಭೂಮಿ ಫಲವತ್ತತೆ ಹೆಚ್ಚಲು ಸಹಾಯವಾಗಿದೆ.
ಇದರ ಪರಿಣಾಮವಾಗಿ ರಾಗಿ ಬೆಳೆಯಲ್ಲಿ ಉತ್ತಮ ಇಳುವರಿ ಸಾಧ್ಯವಾಗಿದೆ.ಇದಲ್ಲದೆ, ಈ ಕೃಷಿಯಿಂದ ದಿನವೂ ಸುಮಾರು 15 ಕೂಲಿ ಕಾರ್ಮಿಕರಿಗೆ ಉದ್ಯೋಗವೂ ಲಭ್ಯವಾಗಿದೆ. ಹೈದರಾಬಾದ್‌ನ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಿದ ಎಂಆರ್-13 ತಳಿಯ ರಾಗಿಯನ್ನು ಆಂಧ್ರ ಪ್ರದೇಶದ ಕುಂದುರ್ಪಿಯ ರೈತ ಉತ್ಪಾದಕ ಸಂಸ್ಥೆಯ ಮಾರ್ಗದರ್ಶನದಲ್ಲಿ ಬೆಳೆದಿದ್ದಾರೆ.
ಈ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಮೇ 6ರಂದು ಹೈದರಾಬಾದ್‌ನ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಯಲ್ಲಿ ರೈತ ಕೆ. ಚಿಕ್ಕಣ್ಣ ಅವರನ್ನು ಸನ್ಮಾನಿಸಲಾಗುತ್ತಿದೆ. ರಾಗಿ ಬೆಳೆಯಿಂದ 8 ಲೋಡ್ ಮೇವು ದೊರೆತಿದ್ದು, ಅವರ ಜಾನುವಾರುಗಳಿಗೆ ಪೌಷ್ಟಿಕ ಆಹಾರವಾಗಲಿದೆ ಎಂದು ಅವರು ತಿಳಿಸಿದ್ದಾರೆ.


















