ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿ : ಬಿಸಿ ಸಂಜೀವಮೂರ್ತಿ

1 Min Read

ಸುದ್ದಿಒನ್, ಹಿರಿಯೂರು, ಡಿಸೆಂಬರ್. 02 : ರೈತರಿಂದಲೇ ಮೆಕ್ಕೆಜೋಳವನ್ನು ನೇರವಾಗಿ ಖರೀದಿಸಲು ಶಿಮೂಲ್ ಒಕ್ಕೂಟದ ಮೂಲಕ, ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದೊಂದಿಗೆ ಕೆಎಂಎಫ್ ತಿರ್ಮಾನಿಸಿದೆ. ಈ ಖರೀದಿಗೆ ಪ್ರತಿ ಕ್ವಿಂಟಾಲ್ ಗೆ 2,400 ದರವನ್ನು ನಿಗದಿಪಡಿಸಲಾಗಿದೆ. ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಿಮುಲ್ ನಿರ್ದೇಶಕ ಬಿಸಿ ಸಂಜೀವ ಮೂರ್ತಿ ತಿಳಿಸಿದರು.

ನಗರದ ಅನ್ನಪೂರ್ಣೇಶ್ವರಿ ಖಾಸಗಿ ಹೋಟೆಲಿನಲ್ಲಿ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಕುರಿತು ಮಾತನಾಡಿದ ಅವರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಬರುವ ರೈತರಿಗೆ ತಿಳಿಸಬೇಕು. ಇದರ ಬಗ್ಗೆ ರೈತರಿಗೆ ಹೆಚ್ಚಿನ ಪ್ರಚಾರ ಮಾಡಬೇಕು. ಸಂಘಗಳ ಸಿಬ್ಬಂದಿಗಳು ರೈತರ ಮೆಕ್ಕೆಜೋಳವನ್ನು ಮೊದಲು ಪರೀಕ್ಷಿಸಿ ತಾಲ್ಲೂಕಿನ ಗುಬ್ಬಿ ಪಶು ಆಹಾರ ಘಟಕಕ್ಕೆ ಕಳುಹಿಸಿಕೊಡಬೇಕು ಎಂದರು.

ಮೆಕ್ಕೆಜೋಳದ ತೇವಾಂಶವು ಕಡ್ಡಾಯವಾಗಿ 14 ಡಿಗ್ರಿ ಇರುವಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ರೈತರಿಂದ ಗರಿಷ್ಠ 25 ಟನ್ ಮೆಕ್ಕೆಜೋಳವನ್ನು ಮಾತ್ರ ಖರೀದಿಸಲಾಗುತ್ತದೆ. ಮೆಕ್ಕೆಜೋಳ ಮಾರಾಟ ಮಾಡಲು ಬಯಸುವ ರೈತರು ಮೊದಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಕೃಷಿ ಇಲಾಖೆ, ಇ-ಗವರ್ನೆನ್ಸ್, ಮತ್ತು NIC ಮೂಲಕ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ರೈತರಿಗೆ ಖರೀದಿ ಕೇಂದ್ರಕ್ಕೆ ಬರುವ ಕುರಿತು SMS ಮೂಲಕ ಮಾಹಿತಿ ಕಳುಹಿಸಲಾಗುತ್ತದೆ. ಈ ಸಂದೇಶ ಬಂದ ನಂತರ ರೈತರು ಗೊತ್ತುಪಡಿಸಿದ ಖರೀದಿ ಕೇಂದ್ರದಲ್ಲಿ ತಮ್ಮ ಮೆಕ್ಕೆಜೋಳವನ್ನು ಮಾರಾಟ ಮಾಡಬೇಕು. ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ ಒದಗಿಸಿರುವ ಅವಕಾಶವನ್ನು ಉಪಯೋಗಿಸಿಕೊಂಡು ರೈತರ ನೇರವಾಗಿ ಸರಬರಾಜು ಮಾಡಬಹುದಾಗಿದೆ. ಹಾಲು ಉತ್ಪಾದಕ ರೈತರು ಅಷ್ಟೇ ಅಲ್ಲದೆ ಮೆಕ್ಕೆಜೋಳ ಬೆಳೆದ ಎಲ್ಲರೂ ರೈತರು ಅವಕಾಶ ಪಡೆಯಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಎಂ. ಪುಟ್ಟರಾಜು, ವಿಸ್ತರಣಾಧಿಕಾರಿ ಕೃಷ್ಣಕುಮಾರ್ , ಪಶುವೈದ್ಯ ಡಾ. ದೀರಾಜ್ ಪ್ರಕಾಶ್ ಜಿ, ಮಂಜುನಾಥ್, ನಿರಂಜನ್ ಮೂರ್ತಿ, ಸುರೇಶ್ ಬಾಬು ಸೇರಿದಂತೆ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಇದ್ದರು.

Share This Article