ಧಾರವಾಡ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕರ ಪುತ್ರ ರಾಜು ಬೋಳಶೆಟ್ಟಿ ಅವರ ಶವ ಧಾರವಾಡ ಸಮೀಪ ಕಾರಿನೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಜ್ಯದ ಗಮನ ಸೆಳೆದಿದೆ. ಮೇಲ್ನೋಟಕ್ಕೆ ಇದು ಹತ್ಯೆ ಪ್ರಕರಣವಾಗಿರುವುದು ಸ್ಪಷ್ಟವಾಗಿದ್ದು, ಪೊಲೀಸರ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ.
ಪೊಲೀಸ್ ಮೂಲಗಳ ಪ್ರಕಾರ, ಈ ಹತ್ಯೆಯ ಹಿಂದೆ ಅಕ್ರಮ ಸಂಬಂಧದ ಕೋಣೆಯೂ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರರಾದ ರಾಜು ಬೋಳಶೆಟ್ಟಿ (53) ಅವರ ಹತ್ಯೆಗೆ ಮಹಿಳೆ ಮತ್ತು ಗ್ಯಾಂಗ್ನ ಕೈವಾಡವಿರುವ ಸಾಧ್ಯತೆಗಳನ್ನೂ ತನಿಖೆ ಸೂಚಿಸುತ್ತಿದೆ.
ಘಟನೆಯ ಪ್ರಕಾರ, ಆರೋಪಿಗಳು ಬೇರೆಡೆ ಹತ್ಯೆ ನಡೆಸಿ ನಂತರ ಶವವನ್ನು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಕಾರಿನಲ್ಲೇ ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಪೆಟ್ರೋಲ್ ಖರೀದಿ ಪ್ರಮುಖ ಸುಳಿವಾಗಿ ಪರಿಣಮಿಸಿದ್ದು, ಸ್ಥಳೀಯ ಪೆಟ್ರೋಲ್ ಬಂಕ್ನ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಮಹತ್ವದ ಮಾಹಿತಿಯನ್ನು ನೀಡಿವೆ.

ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ, ಆರೋಪಿಗಳು ಎರಡು ಕಾರುಗಳಲ್ಲಿ ಸ್ಥಳಕ್ಕೆ ತೆರಳಿರುವುದು ಬಹಿರಂಗವಾಗಿದೆ. ಒಂದು ಕಾರಿನಲ್ಲಿ ಶವವನ್ನು ಸುಟ್ಟು, ಮತ್ತೊಂದು ಕಾರಿನಲ್ಲಿ ವಾಪಸ್ ಬಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.ತ್ವರಿತ ಕಾರ್ಯಾಚರಣೆ ನಡೆಸಿದ ಧಾರವಾಡ ಗ್ರಾಮೀಣ ಪೊಲೀಸರು ಘಟನೆ ನಡೆದ 24 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿ ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣದ ಹಿನ್ನಲೆ ಮತ್ತು ನಿಖರ ಕಾರಣಗಳ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
















