Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING NEWS : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕಾರ

---Advertisement---

ಸುದ್ದಿಒನ್, ಬೆಂಗಳೂರು, ಜೂನ್ 03: ಕರ್ನಾಟಕ ರಾಜಕಾರಣದಲ್ಲಿ ಇಂದು ಹೊಸದೊಂದು ಐತಿಹಾಸಿಕ ಅಧ್ಯಾಯ ಆರಂಭವಾಗಿದೆ. ರಾಜ್ಯದ ನೂತನ  ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಲೋಕಭವನದ ಗಾಜಿನಮನೆಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೂಟ್ ಅವರು ನೂತನ ಸಿಎಂಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.

ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತ್ಯಂತ ಅಪರೂಪದ ಹಾಗೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಬಾರಿಯ ಪ್ರಮಾಣವಚನ ಕಾರ್ಯಕ್ರಮದ ಮುಖ್ಯಾಂಶವೆಂದರೆ, ರಾಜ್ಯದ ಇತಿಹಾಸದಲ್ಲೇ ಹಿಂದೆಂದೂ ಇಲ್ಲದ ರೀತಿಯಲ್ಲಿ ಎಲ್ಲಾ ಧರ್ಮಗಳ ಸ್ವಾಮೀಜಿಗಳು ಹಾಗೂ ಧರ್ಮಗುರುಗಳನ್ನು ಏಕಕಾಲದಲ್ಲಿ ಆಹ್ವಾನಿಸಲಾಗಿತ್ತು. ಸರ್ವ ಧರ್ಮಗಳ ಪೀಠಾಧೀಶರ ದಿವ್ಯ ಸಮ್ಮುಖದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಗದ್ದುಗೆ ಏರುವ ಮೂಲಕ ರಾಜ್ಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಗ್ರ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ದೇಶ ಹಾಗೂ ರಾಜ್ಯದ ಹಲವು ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.

ವಿದ್ಯಾರ್ಥಿ ನಾಯಕನಿಂದ ಮುಖ್ಯಮಂತ್ರಿ ಪೀಠದವರೆಗೆ: ಡಿ.ಕೆ.ಶಿ ರಾಜಕೀಯ ಪಯಣ

ಡಿ.ಕೆ. ಶಿವಕುಮಾರ್ ಅವರು 1962 ಮೇ 15 ರಂದು ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡಆಲಹಳ್ಳಿಯಲ್ಲಿ ಕೆಂಪೇಗೌಡ ಮತ್ತು ಗೌರಮ್ಮ ದಂಪತಿಯ ಪುತ್ರನಾಗಿ ಜನಿಸಿದರು.ಇವರ ಸಹೋದರ ಡಿ.ಕೆ. ಸುರೇಶ್ ಅವರೂ ಸಹ ರಾಜಕಾರಣಿಯಾಗಿದ್ದು, ಸದಾ ನೆರಳಿನಂತೆ ಜೊತೆಗಿದ್ದಾರೆ. 1993 ರಲ್ಲಿ ಉಷಾ ಅವರನ್ನು ವಿವಾಹವಾದ ಶಿವಕುಮಾರ್ ಅವರಿಗೆ ಐಶ್ವರ್ಯ, ಆಭರಣ ಎಂಬ ಇಬ್ಬರು ಪುತ್ರಿಯರು ಹಾಗೂ ಆಕಾಶ್ ಎಂಬ ಪುತ್ರನಿದ್ದಾನೆ. ಹಿರಿಯ ಪುತ್ರಿ ಐಶ್ವರ್ಯ ಅವರು ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ವಿಜಿ ಸಿದ್ಧಾರ್ಥ ಅವರ ಪುತ್ರ ಅಮರ್ತ್ಯ ಅವರನ್ನು ವಿವಾಹವಾಗಿದ್ದಾರೆ.

ಕನಕಪುರದ ಕರಿಯಪ್ಪ ಅವರ ವಿದ್ಯಾಸಂಸ್ಥೆಯಲ್ಲಿ ಆರಂಭಿಕ ಶಾಲಾ ಶಿಕ್ಷಣ ಪೂರೈಸಿದ ಇವರು, ಬಳಿಕ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಿಂದ ಬಿ.ಎ (BA) ಪದವಿ ಪಡೆದರು. ರಾಜಕೀಯ ಕಾರ್ಯದೊತ್ತಡದ ನಡುವೆಯೂ ಶಿಕ್ಷಣ ಮುಂದುವರಿಸಿ, ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ರಾಜ್ಯಶಾಸ್ತ್ರದಲ್ಲಿ ಎಂ.ಎ (MA) ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

1980ರ ದಶಕದ ಆರಂಭದಲ್ಲಿ ಸಾಮಾನ್ಯ ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಪ್ರವೇಶಿಸಿದ ಶಿವಕುಮಾರ್, ತಮ್ಮ ಸಂಘಟನಾ ಚಾತುರ್ಯದಿಂದ ಕಾಂಗ್ರೆಸ್‌ನಲ್ಲಿ ವೇಗವಾಗಿ ಬೆಳೆದರು.

27ನೇ ವಯಸ್ಸಿಗೆ ಶಾಸಕ: 1989ರಲ್ಲಿ ಸಾತನೂರು ಕ್ಷೇತ್ರದಿಂದ ಕೇವಲ 27ನೇ ವಯಸ್ಸಿಗೆ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.ಸಾತನೂರು ಕ್ಷೇತ್ರದಿಂದ ಸತತವಾಗಿ 1994, 1999 ಮತ್ತು 2004 ರಲ್ಲಿ ಜಯಭೇರಿ ಬಾರಿಸಿದರು. ಕ್ಷೇತ್ರ ಮರುವಿಂಗಡಣೆಯ ನಂತರ, 2008, 2013, 2018 ಮತ್ತು 2023 ರ ಚುನಾವಣೆಗಳಲ್ಲಿ ಕನಕಪುರ ಕ್ಷೇತ್ರದಿಂದ ಸತತವಾಗಿ ವಿಜಯ ಸಾಧಿಸಿ ಅಜೇಯರಾಗಿ ಉಳಿದಿದ್ದಾರೆ.

ಸಚಿವ ಸ್ಥಾನದ ಜವಾಬ್ದಾರಿ: 2014 ರಿಂದ 2019 ರವರೆಗೆ ಕರ್ನಾಟಕ ಸರ್ಕಾರದ ವಿವಿಧ ಪ್ರಮುಖ ಇಲಾಖೆಗಳ ಕ್ಯಾಬಿನೆಟ್ ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.

2020 ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಿವಕುಮಾರ್, ಇಡೀ ರಾಜ್ಯಾದ್ಯಂತ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದರು. ಅದರ ಫಲವಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಜಯಗಳಿಸಿತು. ಮೇ 20, 2023 ರಂದು ರಾಜ್ಯದ 9ನೇ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಡಿ.ಕೆ. ಶಿವಕುಮಾರ್, ಇದೀಗ ಯಶಸ್ವಿಯಾಗಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

Join WhatsApp

Join Now

Join Telegram

Join Now