ಬೆಂಗಳೂರು.ಆಗಸ್ಟ್.14: ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಜಿ.ಎಸ್. ಪಾಟೀಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆಯೇ ಹಂಗಾಮಿ ಸ್ಪೀಕರ್ ಟಿ.ಬಿ. ಜಯಚಂದ್ರ ಅವರು ಸ್ಪೀಕರ್ ಆಯ್ಕೆ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪೀಕರ್ ಸ್ಥಾನಕ್ಕೆ ಜಿ.ಎಸ್. ಪಾಟೀಲ್ ಅವರ ಹೆಸರನ್ನು ಅಧಿಕೃತವಾಗಿ ಪ್ರಸ್ತಾಪಿಸಿದರು. ಈ ಪ್ರಸ್ತಾಪಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಸಂಪೂರ್ಣ ಬೆಂಬಲ ಸೂಚಿಸಿ ಅನುಮೋದನೆ ನೀಡಿದರು.
ಸ್ಪೀಕರ್ ಹುದ್ದೆಗೆ ಬೇರೆ ಯಾವುದೇ ಸ್ಪರ್ಧೆ ಎದುರಾಗದ ಕಾರಣ, ಜಿ.ಎಸ್. ಪಾಟೀಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹಂಗಾಮಿ ಸಭಾಧ್ಯಕ್ಷರು ಘೋಷಿಸಿದರು. ನಂತರ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸದನದ ಹಿರಿಯ ನಾಯಕರು ನೂತನ ಸ್ಪೀಕರ್ ಅವರನ್ನು ಗೌರವಪೂರ್ವಕವಾಗಿ ಸಭಾಧ್ಯಕ್ಷರ ಪೀಠಕ್ಕೆ ಕರೆದೊಯ್ದು ಅಭಿನಂದನೆಗಳನ್ನು ಸಲ್ಲಿಸಿದರು.









