ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ಸಸ್ಯವೆಂದು ಪೂಜಿಸಲ್ಪಡುವ ತುಳಸಿಗೆ ಆಯುರ್ವೇದದಲ್ಲೂ ವಿಶೇಷ ಸ್ಥಾನವಿದೆ. ತುಳಸಿ ಕೇವಲ ಪೂಜನೀಯ ಗಿಡ ಮಾತ್ರವಲ್ಲ, ಇದರಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣಗಳಿವೆ. ದಿನವೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4 ತುಳಸಿ ಎಲೆಗಳನ್ನು ತಿನ್ನುವುದರಿಂದ ಅಥವಾ ಅದರ ರಸವನ್ನು ಸೇವಿಸುವುದರಿಂದ ದೇಹಕ್ಕೆ ಸಿಗುವ ಅದ್ಭುತ ಪ್ರಯೋಜನಗಳ ಕುರಿತು ಆಯುರ್ವೇದ ತಜ್ಞರು ತಿಳಿಸಿದ್ದಾರೆ.
ತುಳಸಿಯಲ್ಲಿರುವ ಪೋಷಕಾಂಶಗಳು:
ತುಳಸಿ ಎಲೆಗಳಲ್ಲಿ ವಿಟಮಿನ್ ಎ, ಸಿ, ಕೆ ಜೊತೆಗೆ ಕ್ಯಾಲ್ಸಿಯಂ, ಐರನ್ (ಕಬ್ಬಿಣಾಂಶ), ಮೆಗ್ನೀಸಿಯಮ್, ಜಿಂಕ್ ಮತ್ತು ಪೊಟ್ಯಾಸಿಯಮ್ನಂತಹ ಖನಿಜಗಳು ಹೇರಳವಾಗಿವೆ. ಜೊತೆಗೆ ‘ಯುಜಿನಾಲ್’ (Eugenol) ನಂತಹ ಪ್ರಬಲ ಆಂಟಿಆಕ್ಸಿಡೆಂಟ್ಗಳು ಇದರಲ್ಲಿವೆ.
ಮುಖ್ಯ ಆರೋಗ್ಯ ಪ್ರಯೋಜನಗಳು:
ಜೀರ್ಣಕ್ರಿಯೆ ಸುಧಾರಣೆ ಹಾಗೂ ಹಸಿವು ಹೆಚ್ಚಳ:
ತುಳಸಿ ಜೀರ್ಣಾಂಗವ್ಯೂಹದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ಇದು ಸಹಕಾರಿ. ನಾಲ್ಕು ತುಳಸಿ ಎಲೆಗಳು ಮತ್ತು ಎರಡು ಕಾಳುಮೆಣಸನ್ನು ನುಣ್ಣಗೆ ಅರೆದು ಮಾತ್ರೆ ಮಾಡಿ, ಊಟಕ್ಕೆ ಅರ್ಧ ಗಂಟೆ ಮುಂಚಿತವಾಗಿ ಸೇವಿಸಿದರೆ ಹಸಿವು ಉತ್ತಮವಾಗುತ್ತದೆ ಹಾಗೂ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಊಟ ಮಾಡಲು ಹಟ ಮಾಡುವ ಮಕ್ಕಳಿಗೆ ಬೆಳಿಗ್ಗೆ 4 ತುಳಸಿ ಎಲೆ ನೀಡಿದರೆ ಜೀರ್ಣಕ್ರಿಯೆ ಸರಿಯಾಗಿ ಹಸಿವು ಹೆಚ್ಚುತ್ತದೆ.
ಉಸಿರಾಟದ ಸಮಸ್ಯೆ ಮತ್ತು ಕೆಮ್ಮಿಗೆ ಪರಿಹಾರ:
ಕಫ ಹಾಗೂ ಕೆಮ್ಮು ಇರುವಾಗ ಪ್ರತಿ ಗಂಟೆಗೆ 4 ತುಳಸಿ ಎಲೆಗಳನ್ನು ಸೇವಿಸುವುದರಿಂದ ಶಮನ ಸಿಗುತ್ತದೆ. ಸಾಮಾನ್ಯ ಜ್ವರ ಬಂದಾಗ ತುಳಸಿ ಎಲೆಯ ಕಷಾಯ ಕುಡಿಯುವುದರಿಂದ ಅಥವಾ ಗಿಡದ ಕಾಂಡವನ್ನು ಜಜ್ಜಿ ಕಷಾಯ ಮಾಡಿ ಕುಡಿಯುವುದರಿಂದ ಜ್ವರ ಕಡಿಮೆಯಾಗುತ್ತದೆ.
ಅಸ್ತಮಾ (ಉಬ್ಬಸ) ತಡೆಗಟ್ಟುವಿಕೆ:
ಆಯುರ್ವೇದದಲ್ಲಿ ಅಸ್ತಮಾ ನಿವಾರಣೆಗೆ ಬಳಸುವ ಬಹುತೇಕ ಔಷಧಗಳಲ್ಲಿ ತುಳಸಿಯನ್ನು ಬಳಸಲಾಗುತ್ತದೆ. ಆಗಾಗ್ಗೆ ಉಸಿರಾಟದ ತೊಂದರೆ/ಉಬ್ಬಸಕ್ಕೆ ಒಳಗಾಗುವವರು ತುಳಸಿ ಕಷಾಯವನ್ನು ನಿಯಮಿತವಾಗಿ ಸೇವಿಸಿದರೆ ಅಸ್ತಮಾ ಸಮಸ್ಯೆಯಿಂದ ಶೀಘ್ರ ಉಪಶಮನ ಪಡೆಯಬಹುದು.
ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಒತ್ತಡ ಕಡಿಮೆ:
ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸಲು ಮತ್ತು ಮಾನಸಿಕ ಒತ್ತಡವನ್ನು (Stress) ಕಡಿಮೆ ಮಾಡಲು ತುಳಸಿ ನೆರವಾಗುತ್ತದೆ.
ಹೊಟ್ಟೆಯ ಕ್ರಿಮಿಗಳು ಮತ್ತು ರಕ್ತಹೀನತೆ ನಿವಾರಣೆ:
ತುಳಸಿಯು ಹೊಟ್ಟೆಯಲ್ಲಿರುವ ಹಾನಿಕಾರಕ ಕ್ರಿಮಿಗಳನ್ನು ನಾಶಪಡಿಸುವುದಲ್ಲದೆ, ರಕ್ತಹೀನತೆ (Anemia) ಸಮಸ್ಯೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಸಂಜೀವಿನಿಯಂತೆ ತುಳಸಿ:
ತುಳಸಿಯಲ್ಲಿರುವ ಸಾಂಪ್ರದಾಯಿಕ ಹಾಗೂ ಔಷಧೀಯ ಗುಣಗಳಿಂದಾಗಿ ಇದನ್ನು ಪ್ರಕೃತಿಯ ‘ಸಹಜ ಸಂಜೀವಿನಿ’ ಎಂದು ಕರೆಯಲಾಗುತ್ತದೆ. ದಿನನಿತ್ಯದ ಜೀವನದಲ್ಲಿ ತುಳಸಿಯನ್ನು ಭಾಗವಾಗಿಸಿಕೊಳ್ಳುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.













