ಸುದ್ದಿಒನ್, ಚಿತ್ರದುರ್ಗ.ಆಗಸ್ಟ್.14: ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ವೇಗವಾಗಿ ಬಂದ ಲಾರಿಯೊಂದು ಎರಡು ಕಾರುಗಳಿಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರುಗಳು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಬೆಂಗಳೂರು ಮೂಲದ ಚಾಲಕ ಗೋಪಿ (43) ಹಾಗೂ ಮತ್ತೊಂದು ಕಾರಿನ ಚಾಲಕ ಪವನ್ (23) ಎಂಬುವವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇದೇ ಘಟನೆಯಲ್ಲಿ ಕಾರಿನಲ್ಲಿದ್ದ ಮಂಜುನಾಥ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ನೆರವಿನಿಂದ ಗಾಯಾಳುವನ್ನು ತಕ್ಷಣವೇ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತ ಎಸಗಿದ ಬಳಿಕ ಲಾರಿ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.









