ಲಂಡನ್: ಇಂಗ್ಲೆಂಡ್‌ನ ದಕ್ಷಿಣ ಭಾಗದಲ್ಲಿ ಗುರುವಾರ ಭೀಕರ ರೈಲು ಅಪಘಾತ ಸಂಭವಿಸಿದ್ದು, ಪ್ರಯಾಣಿಕರ ರೈಲಿನ ಕನಿಷ್ಠ ಮೂರು ಬೋಗಿಗಳು ಹಳಿ ತಪ್ಪಿ ಪಲ್ಟಿಯಾಗಿವೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣವೇ ಭಾರೀ ಪ್ರಮಾಣದ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು.
ಲಂಡನ್‌ನ ವಿಕ್ಟೋರಿಯಾ ನಿಲ್ದಾಣದಿಂದ ಈಸ್ಟ್‌ಬೋರ್ನ್‌ಗೆ ತೆರಳುತ್ತಿದ್ದ ಸದರ್ನ್ ರೈಲ್ವೆಯ ರೈಲು, ಪ್ರವಾಸಿ ನಗರವಾದ ಲೂಯಿಸ್ (Lewes) ಹೊರವಲಯದಲ್ಲಿ ನಿಯಂತ್ರಣ ಕಳೆದುಕೊಂಡು ಹಳಿ ತಪ್ಪಿದೆ ಎಂದು ರೈಲ್ವೆ ಅಧಿಕಾರಿಗಳು ಹಾಗೂ ನೆಟ್‌ವರ್ಕ್ ರೈಲ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೇಗ ಪಡೆಯುತ್ತಿದ್ದಂತೆ ಡಬ್ಬಿ ಮೇಲಕ್ಕೆ ಜಿಗಿದ ಅನುಭವ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರಾಬ್ ಬ್ರಾಡ್ಲಿ ಎಂಬ ಪ್ರಯಾಣಿಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ತಾವು 6 ವರ್ಷದ ಮಗಳೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ರೈಲು ವೇಗ ಪಡೆಯುತ್ತಿದ್ದಂತೆ ಡಗಮಗಿಸಲು ಆರಂಭಿಸಿತು. ಏಕಾಏಕಿ ತಾವು ಕುಳಿತಿದ್ದ ಬೋಗಿ ಮೇಲಕ್ಕೆ ಎಗರಿದಂತೆ ಅನುಭವವಾಗಿದ್ದು, ತಕ್ಷಣವೇ ತುರ್ತು ಬ್ರೇಕ್‌ಗಳು ಕಾರ್ಯನಿರ್ವಹಿಸಿದವು ಎಂದು ಅವರು ತಿಳಿಸಿದ್ದಾರೆ.
ಬ್ರೇಕ್ ಹಾಕುತ್ತಿದ್ದಂತೆ ಪ್ರಯಾಣಿಕರು, ಲ್ಯಾಪ್‌ಟಾಪ್‌ಗಳು, ಬ್ಯಾಗ್‌ಗಳು ಸೇರಿದಂತೆ ಹಲವು ವಸ್ತುಗಳು ಮುಂದಕ್ಕೆ ಬಿದ್ದವು. ರೈಲು ನಿಲ್ಲುವ ಮುನ್ನ ಸಾಕಷ್ಟು ದೂರದವರೆಗೆ ಘರ್ಷಣೆಯೊಂದಿಗೆ ಸಾಗಿತು. ಬಳಿಕ ಹಿಂದಕ್ಕೆ ನೋಡಿದಾಗ ರೈಲಿನ ಹಿಂಭಾಗದ ಭಾಗ ಹಾನಿಗೊಳಗಾಗಿದ್ದು, ಬೋಗಿಯೊಳಗೆ ಹೊಗೆ ಮತ್ತು ಧೂಳು ತುಂಬಿಕೊಂಡಿತ್ತು ಎಂದು ಬ್ರಾಡ್ಲಿ ಹೇಳಿದ್ದಾರೆ.
ಹೊಲಕ್ಕೆ ಬಿದ್ದ ಬೋಗಿ
ತಮ್ಮ ಬೋಗಿಯ ಹಿಂದಿದ್ದ ಬೋಗಿ ಒಂದು ಬದಿಗೆ ಪಲ್ಟಿಯಾಗಿ ಸಮೀಪದ ಹೊಲಕ್ಕೆ ಬಿದ್ದಿರುವುದು ಬಳಿಕ ಗೊತ್ತಾಯಿತು. ಬ್ರಾಡ್ಲಿ ಹಾಗೂ ಅವರ ಮಗಳು ಅಪಾಯದಿಂದ ಪಾರಾಗಿದ್ದಾರೆ. ಆದರೆ ಪಲ್ಟಿಯಾದ ಬೋಗಿಗಳಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಕೆಲವರು ರಕ್ತಸಿಕ್ತ ಸ್ಥಿತಿಯಲ್ಲಿ ಕಂಡುಬಂದರು. ಕಿಟಕಿಗಳ ಗಾಜು ಒಡೆದು ಹಲವರಿಗೆ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ಮೂರು ಹೆಲಿಕಾಪ್ಟರ್‌ಗಳಿಂದ ರಕ್ಷಣಾ ಕಾರ್ಯ
ಅಪಘಾತದ ಮಾಹಿತಿ ಸಿಕ್ಕ ತಕ್ಷಣ ಅಗ್ನಿಶಾಮಕ ಸಿಬ್ಬಂದಿ, ಪ್ಯಾರಾಮೆಡಿಕ್ಸ್ ಹಾಗೂ ತುರ್ತು ಸೇವೆಗಳ ಸಿಬ್ಬಂದಿಯನ್ನು ಸ್ಥಳಕ್ಕೆ ರವಾನಿಸಲಾಯಿತು. ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲು ಮೂರು ಹೆಲಿಕಾಪ್ಟರ್‌ಗಳನ್ನೂ ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಲಾಗಿದೆ.
ಅಪಘಾತದಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಅಥವಾ ಇತರ ಯಾವುದೇ ಹಾನಿ ಸಂಭವಿಸಿದೆಯೇ ಎಂಬ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಘಟನೆ ಕುರಿತು ಬ್ರಿಟನ್‌ನ ಸಾರಿಗೆ ಸಚಿವರು ಆತಂಕ ವ್ಯಕ್ತಪಡಿಸಿದ್ದು, ತುರ್ತು ಸೇವೆಗಳ ಸಿಬ್ಬಂದಿ ಗಾಯಗೊಂಡ ಪ್ರಯಾಣಿಕರಿಗೆ ಅಗತ್ಯ ನೆರವು ನೀಡುವಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.
ರೈಲು ಹಳಿ ತಪ್ಪಲು ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದ್ದು, ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
🚨 Train flips near Lewes 🚂
Just checked the latest – Southern service off the tracks on the hottest day of the year, carriages on their side.Emergency crews are there, no confirmed injuries yet. If you’re travelling Sussex or Brighton lines, delay plans and check National… pic.twitter.com/L2IxGGjjiJ
— British Patriot UK 🇬🇧 (@EnglandUK) August 13, 2026














