Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಂಶೋಧನಾ ಲೋಕದ ಧೀಮಂತ ಚೇತನ ಪ್ರೊ. ಶ್ರೀಶೈಲ ಆರಾಧ್ಯ

---Advertisement---

ವಿಶೇಷ ಲೇಖನ: ಕೆ. ಪಿ. ಎಂ. ಗಣೇಶಯ್ಯ,        ನೀನಾಸಂ-93, ರಂಗ ನಿರ್ದೇಶಕರು, ಚಿತ್ರದುರ್ಗ (ದೂರವಾಣಿ: 9448664878)

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 03 : ಭಾರತ ಸ್ವಾತಂತ್ರ್ಯದ ಅಂಚಿನಲ್ಲಿದ್ದ ಸಂದರ್ಭದಲ್ಲಿ, ಅಂದರೆ 1946ರಲ್ಲಿ ಜನ್ಮತಾಳಿದ ಹಿರಿಯ ಸಾಹಿತಿ ಪ್ರೊ. ಶ್ರೀಶೈಲ ಆರಾಧ್ಯರ ಬದುಕು ಸ್ವಾತಂತ್ರ್ಯದ ಸಂಧಿಕಾಲದ ಮಧ್ಯೆ ಅರಳಿದ ದೈತ್ಯ ಸಾಹಿತ್ಯ ಪ್ರತಿಭೆಯಾಗಿದೆ. ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲಘಟ್ಟದ ಆಡಳಿತ ಸೂತ್ರದ ಹೊಸ ನಾಂದಿ ಹಾಡಬಹುದಾದ ಸಂದರ್ಭದ ಇತಿಹಾಸದ ಪುಟಗಳಲ್ಲಿ ಬೆಳೆದುಬಂದ ಇವರು, ಇಂದು ಸಂಶೋಧಕರ ಸಾಲಿನಲ್ಲಿ ಅಚ್ಚಳಿಯದೇ ಉಳಿದ ಧೀಮಂತರಾಗಿದ್ದಾರೆ. 1946ರ ಅಕ್ಟೋಬರ್ ತಿಂಗಳಲ್ಲಿ ಜನಿಸಿದ ಇವರು, 2024ರ ಜನವರಿ 04ರಂದು ನಿಧನರಾದರು.

ವಿದ್ಯಾಭ್ಯಾಸದ ಹಾದಿ : 

ಪ್ರೊ. ಶ್ರೀಶೈಲ ಆರಾಧ್ಯರು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಅಕ್ಟೋಬರ್ 1946 ರಲ್ಲಿ ಜನಿಸಿದರು. ತಂದೆ ಜೆ. ಹಾಲಾರಾಧ್ಯ ಮತ್ತು ತಾಯಿ ಮರುಳಮ್ಮ ದಂಪತಿಯ ಜೇಷ್ಠಪುತ್ರರಾಗಿ ಜನಿಸಿದ ಇವರ ಪತ್ನಿ ಸಿ. ವಿ. ಉಮಾದೇವಿ. ಈ ದಂಪತಿಗೆ ಮೂವರು ಹೆಣ್ಣುಮಕ್ಕಳು: ಎಸ್. ಎಸ್. ರೋಹಿಣಿ ಶೈಲೇಂದ್ರ, ಡಾ. ಎಸ್. ಎಸ್. ಅನುರಾಧ ಡಾ. ನಾಗರಾಜ್ ಹಾಗೂ ಮತ್ತೊಬ್ಬ ಪುತ್ರಿ ವಿಧಿವಶರಾಗಿದ್ದಾರೆ. ತುಂಬು ಜೀವನದ ಮುದ್ದಿನ ಮಕ್ಕಳ ಲಾಲನೆ ಪಾಲನೆಯಲ್ಲಿ ಸುಖ-ದುಃಖ, ನೋವು-ನಲಿವುಗಳನ್ನು ಕಂಡ ಕ್ಷಣಗಳು ಅನೇಕ. ಇವರ ಪ್ರಾಥಮಿಕ ಶಿಕ್ಷಣ ಸ್ವಗ್ರಾಮ ಸೋಮನಹಳ್ಳಿಯಲ್ಲಿ ನೆರವೇರಿದರೆ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಬೂದಿಹಾಳು ಮತ್ತು ಶ್ರೀರಾಂಪುರದಲ್ಲಿ ಪೂರ್ಣಗೊಂಡಿತು. ನಂತರ ತುಮಕೂರು ಮತ್ತು ಧಾರವಾಡದಲ್ಲಿ ಉನ್ನತ ಶಿಕ್ಷಣ ಪಡೆದ ಆರಾಧ್ಯರು, ಕನ್ನಡದ ಸಾರಸ್ವತ ಲೋಕದ ಹಳಗನ್ನಡ, ಮಧ್ಯಕಾಲೀನ, ನವೋದಯ ಮತ್ತು ಆಧುನಿಕ ಕನ್ನಡ ಸಾಹಿತ್ಯದ ಅರಿವಿನ ಬುತ್ತಿಯನ್ನು ಸಮೃದ್ಧವಾಗಿ ಕಟ್ಟಿಕೊಂಡರು.

ಬೋಧನಾ ವೃತ್ತಿ ಮತ್ತು ಬಹುಮುಖಿ ಅಧ್ಯಯನ ಶೀಲತೆ

ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಚಳ್ಳಕೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಕಾಲೇಜುಗಳಲ್ಲಿ ಬರೋಬ್ಬರಿ 33 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಅಪಾರ ಶಿಷ್ಯಬಳಗವನ್ನು ಸಂಪಾದಿಸಿದ್ದಾರೆ. ಕೇವಲ ಬೋಧನೆಗಷ್ಟೇ ಸೀಮಿತವಾಗದೆ ಜ್ಯೋತಿಷ್ಯ ಅಧ್ಯಯನ, ರತ್ನಶಾಸ್ತ್ರ, ಭಾರತೀಯ ಪ್ರಾಚೀನ ಆಚರಣೆಗಳು, ನಂಬಿಕೆಗಳು, ಹಳೆಯ ಕಾಗದ ಪತ್ರಗಳ ಅಧ್ಯಯನ, ಮರಗಿಡ, ಅಂಚೆಯ ಸ್ಟ್ಯಾಂಪು ಮೊದಲಾದ ವೈವಿಧ್ಯಮಯ ವಿಷಯಗಳ ಕುರಿತು ಬರೆದು ಹಾಗೂ ಸಂಪಾದಿಸಿದ ಮಹತ್ವದ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.

ಸಂಶೋಧನೆಯ ಮಹತ್ವದ ಮೈಲಿಗಲ್ಲು

ಹುಟ್ಟಿದೂರಿನ ಕೋಟೆಕೊತ್ತಲ, ಗುಡಿ, ಹಳ್ಳ-ಕೊಳ್ಳ, ಉಪ್ಪಿನ ಮಾಳೆ, ಗುಡ್ಡ, ಗವಿ, ಕಲ್ಲು ಪಡಾವುಗಳ ನಡುವೆ ಬೆಳೆದ ಆರಾಧ್ಯರಿಗೆ ಸ್ವಾತಂತ್ರ್ಯ ಹೋರಾಟ, ಗಾಂಧೀ ಬದುಕು, ತತ್ವ, ದೇಶ ಹಾಗೂ ಸಮಾಜಸ್ವಾಸ್ಥ್ಯದ ಬಗ್ಗೆ ಅಪ್ಪ-ಅಮ್ಮ ನೀಡಿದ ಮಾರ್ಗದರ್ಶನವು ಶ್ರೇಷ್ಠ ಪ್ರಾಧ್ಯಾಪಕರಾಗಿ ರೂಪುಗೊಳ್ಳಲು ಅನುಕೂಲವಾಯಿತು. ನಾಡಿನ ಸಂಸ್ಕೃತಿ, ಪ್ರಾಚೀನ ಇತಿಹಾಸ, ಪ್ರಾಚೀನ ವಸ್ತುಗಳು, ನವರತ್ನಗಳು, ಅವಧೂತರು, ನಂಬಿಕೆ-ಆಚರಣೆಗಳ ಬಗೆಗೆ ಮೂವತ್ತಕ್ಕೂ ಹೆಚ್ಚು ಲೇಖನಗಳನ್ನು ಇವರು ಮಂಡಿಸಿದ್ದಾರೆ ಮತ್ತು ಪ್ರಕಟಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಾದ್ಯಂತ ಹರಡಿರುವ ಬೆಟ್ಟಗುಡ್ಡಗಳ ಗವಿಯಲ್ಲಿನ ಶಿಲಾಯುಗದ ಮಾನವ ವಿರಚಿತ ರೇಖಾಚಿತ್ರಗಳು, ನೆರಳು ಬೆಳಕಿನ ಚಿತ್ರಗಳು, ಹುಟ್ಟು ಬಂಡೆಗಳಲ್ಲಿನ ಪ್ರಾಣಿ ಮತ್ತು ಮನುಷ್ಯನ ಆಕೃತಿಗಳನ್ನು ಉಜ್ಜಿ ಮೂಡಿಸಿರುವ ವಿಷಯ ಕುರಿತ ‘ಸಂಶೋಧನೆಯ ಹಾದಿಯಲ್ಲಿ’ ಎಂಬ ಕೃತಿಯನ್ನು ಇವರು 1983ರಲ್ಲಿ ಪ್ರಕಟಿಸಿದರು. ಈ ಮೂಲಕ ಪುರಾತನ ಇತಿಹಾಸದ ಪುಟಗಳನ್ನು ಆಳವಾದ ಅಧ್ಯಯನಕ್ಕಾಗಿ ತೆರೆದಿಟ್ಟರು. ಇವರ ಈ ಕೃತಿಯಿಂದ ಆಕರ್ಷಿತರಾಗಿ ಆಸಕ್ತಿ ತಳೆದ ಅನೇಕ ದೇಶೀಯರು ಮತ್ತು ವಿದೇಶಿ ವಿದ್ವಾಂಸರು ಸಂಶೋಧನೆಯ ವಿದ್ಯಾಭ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೊಂದು ಕಾರ್ಯಶೋಧನೆಯು ತಮ್ಮ ಇಡೀ ಜೀವನದ ಸಾಧನೆಯ ಮಹತ್ವದ ಮೈಲಿಗಲ್ಲು ಎಂದು ಆರಾಧ್ಯರು ಗೌರವದಿಂದ ಸ್ಮರಿಸುತ್ತಾರೆ.

ಸಾಹಿತ್ಯ ಕೃಷಿಯ ಅನನ್ಯ ಕೊಡುಗೆಗಳು

ಆರಾಧ್ಯರ ಸಾಹಿತ್ಯ ಕ್ಷೇತ್ರದ ಕೊಡುಗೆ ಅತ್ಯಂತ ವಿಶಾಲವಾದುದು. ಸಂಭಾವನಾ ಕೃತಿ ಸಂಪಾದನೆಯಾದ ‘ಕಾಶಿ ಸಾಹಿತ್ಯ ಸಮೀಕ್ಷೆ’, ಪ್ರಾಚೀನ ಗುಹಾಚಿತ್ರಗಳ ಬಗೆಗಿನ ‘ಸಂಶೋಧನೆಯ ಹಾದಿಯಲ್ಲಿ’, ಲೇಖನಗಳ ಸಂಕಲನವಾದ ‘ಸೀಮೇಗಿಲ್ಲದೋರ ಸೂರಿನ ಕೆಳಗೆ’, ವಯಸ್ಕರ ಶಿಕ್ಷಣ ಸಮಿತಿಗೆ ಬರೆದ ‘ಚಿತ್ರದುರ್ಗ’ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆಗೆ ರಚಿಸಿಕೊಟ್ಟ ಮತ್ತೊಂದು ‘ಚಿತ್ರದುರ್ಗ’ ಕೃತಿಗಳು ಗಮನಾರ್ಹ. ಜೊತೆಗೆ ಜಾನಪದ ಅಕಾದೆಮಿಗೆ ‘ಸೋಮನ ಕರಿಯಪ್ಪ’, ತರಾಸು ಸ್ಮರಣ ಸಂಪುಟದ ಸಂಪಾದನೆಯಾದ ‘ಗಿರಿಮಲ್ಲಿಗೆ’, ವಿದ್ವಾಂಸ ಮಿತ್ರರೊಡನೆ ಕೈಜೋಡಿಸಿ ಸಿದ್ಧಪಡಿಸಿದ ಎಸ್ಸೆನ್ ಸಂಪುಟದ ಸಂಪಾದನೆಯಾದ ‘ರಾಷ್ಟ್ರನಾಯಕ’, 2020ರ ಚಿತ್ರಣ ಕೃತಿ ‘ಪನ್ನೀರು ಗಿಂಡಿ’ ಹಾಗೂ 2021ರಲ್ಲಿ ಪ್ರಕಟಗೊಂಡ ‘ಚಿತ್ರದುರ್ಗ ಜಿಲ್ಲೆಯ ಮೂವರು ಅವಧೂತರು’ ಮುಂತಾದ ಮೌಲಿಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.

ಸಂಸ್ಥೆಗಳ ನಾಯಕತ್ವ ಮತ್ತು ಮುನ್ನಡೆಸಿದ ಸ್ಥಾನಮಾನಗಳು

ಸಾಹಿತ್ಯ ಮತ್ತು ಇತಿಹಾಸದ ರಕ್ಷಣೆಯ ಹಿತದೃಷ್ಟಿಯಿಂದ ಇವರು ಅನೇಕ ಪ್ರಮುಖ ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಜವಾಬ್ದಾರಿ ನಿಭಾಯಿಸಿದ್ದಾರೆ. ಚಿತ್ರದುರ್ಗ ಜಿಲ್ಲಾ ಇತಿಹಾಸ ಸಂಶೋಧನ ಮಂಡಳಿ, ಚಿತ್ರದುರ್ಗ ಕೋಟೆ ಸ್ಮಾರಕ ರಕ್ಷಣಾ ವೇದಿಕೆ ಹಾಗೂ ಸ್ಥಳೀಯ ನಾಗರೀಕ ಹಿತರಕ್ಷಣಾ ವೇದಿಕೆಗಳ ಅಧ್ಯಕ್ಷರಾಗಿ ಹಾಗೂ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಮಹತ್ವದ ಮಾರ್ಗದರ್ಶನ ನೀಡಿದ್ದಾರೆ.

ಅರಸಿ ಬಂದ ಪ್ರಶಸ್ತಿ ಮತ್ತು ಪುರಸ್ಕಾರಗಳು

ಇವರ ನಿಸ್ವಾರ್ಥ ಸಾಧನೆಗೆ ಹಲವು ಗೌರವಗಳು ಒಲಿದುಬಂದಿವೆ. 2000ನೇ ಇಸವಿಯಲ್ಲಿ ಚಿತ್ರದುರ್ಗ ಜ್ಞಾನಭಾರತಿ ಟ್ರಸ್ಟ್ ಗೌರವ, 2006ರಲ್ಲಿ ಚಿತ್ರದುರ್ಗ ಜಿಲ್ಲಾ ಉತ್ಸವದಲ್ಲಿ ಗೌರವ, ಅದೇ ವರ್ಷ ಜಿಲ್ಲಾಡಳಿತದಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಗೌರವ, 2007ರಲ್ಲಿ ಉಡುಪಿಯಲ್ಲಿ ಜರುಗಿದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಹಾಗೂ 2011ರಲ್ಲಿ ಕಾಂಗ್ರೆಸ್ ಸಂಸ್ಥಾಪನೆಯ 127ನೇ ವರ್ಷಾಚರಣೆ ಸಂದರ್ಭದಲ್ಲಿ ಚಿತ್ರದುರ್ಗ ಕಾಂಗ್ರೆಸ್ ಸಮಿತಿ ವತಿಯಿಂದ ಗೌರವಗಳು ಸಂದಿವೆ. ಅಲ್ಲದೆ ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದಿಂದ ಪ್ರತಿಷ್ಠಿತ “ಮುರುಘಾಶ್ರೀ” ಪ್ರಶಸ್ತಿಯನ್ನು ಸ್ವೀಕರಿಸಿ ಗೌರವಿಸಲ್ಪಟ್ಟಿದ್ದಾರೆ.

ವಿಶೇಷ ಲೇಖನ: ಕೆ. ಪಿ. ಎಂ. ಗಣೇಶಯ್ಯ, ನೀನಾಸಂ-93, ರಂಗ ನಿರ್ದೇಶಕರು, ಚಿತ್ರದುರ್ಗ (ದೂರವಾಣಿ: 9448664878)

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now