Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

2028ರ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಭರ್ಜರಿ ತಯಾರಿ: ಬೆಂಗಳೂರಿನಲ್ಲಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮಹತ್ವದ ಸಭೆ

---Advertisement---

ಸುದ್ದಿಒನ್,ಬೆಂಗಳೂರು,ಮೇ.24 : ರಾಜ್ಯದಲ್ಲಿ ಮುಂದಿನ 2028ರ ವಿಧಾನಸಭಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕಮಲ ಪಡೆ ಅದಕ್ಕಾಗಿ ಈಗಿನಿಂದಲೇ ಭರ್ಜರಿ ತಾಲೀಮು ಆರಂಭಿಸಿದೆ.

ಇದರ ಮೊದಲ ಹೆಜ್ಜೆಯಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರು ಇಂದು ಬೆಂಗಳೂರಿಗೆ ಆಗಮಿಸಿ ಸರಣಿ ಸಭೆಗಳನ್ನು ನಡೆಸುವ ಮೂಲಕ ರಾಜ್ಯ ನಾಯಕರಿಗೆ ಹೈವೋಲ್ಟೇಜ್ ಟಾಸ್ಕ್ ನೀಡಿದ್ದಾರೆ.

ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿದ ನಿತಿನ್ ನಬಿನ್ ಅವರಿಗೆ ಮಲ್ಲೇಶ್ವರಂನ ಪಕ್ಷದ ಕಚೇರಿ ‘ಜಗನ್ನಾಥ ಭವನ’ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಮಲ್ಲೇಶ್ವರಂನ ಜಗನ್ನಾಥ ಭವನದಲ್ಲಿ ನಡೆದ ಪ್ರಮುಖ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ನಿತಿನ್ ನಬಿನ್ ಅವರು ರಾಜ್ಯ ನಾಯಕರಿಗೆ ಖಡಕ್ ಸೂಚನೆ ಹಾಗೂ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಮೋದಿ ಸರ್ಕಾರದ ಜನಪರ ಯೋಜನೆಗಳು ಮತ್ತು ಐತಿಹಾಸಿಕ ಸಾಧನೆಗಳನ್ನು ರಾಜ್ಯದ ಮೂಲೆ ಮೂಲೆಗೂ ಹಾಗೂ ಪ್ರತಿಯೊಂದು ಹಳ್ಳಿಗೂ ತಲುಪಿಸಬೇಕು ಎಂದು ಅವರು ಹೆಳಿದ್ದಾರೆ.

ಇದೇ ವೇಳೆ ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳು, ಸಾಲು ಸಾಲು ಹಗರಣಗಳು ಮತ್ತು ಜನವಿರೋಧಿ ನೀತಿಗಳ ವಿರುದ್ಧ ಮೌನವಾಗಿರದೆ ಬೀದಿಗಿಳಿದು ಉಗ್ರ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಗಳನ್ನು ಗೆಲ್ಲಲು ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವುದು ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಬೂತ್ ಮಟ್ಟದ ಬಲವರ್ಧನೆಗಾಗಿ ವಿಶೇಷ ನೀಲನಕ್ಷೆಯನ್ನು ಸಭೆಯಲ್ಲಿ ಸಿದ್ಧಪಡಿಸಲಾಗಿದೆ.

ಪಕ್ಷದ ಸಂಘಟನೆಯನ್ನು ಚುರುಕುಗೊಳಿಸುವ ಈ ಮಹತ್ವದ ಸಭೆಯಲ್ಲಿ ಕರ್ನಾಟಕ ಬಿಜೆಪಿಯ ಪ್ರಮುಖ ನಾಯಕರ ದಂಡೇ ನೆರೆದಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗ್ರವಾಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ರಾಜ್ಯ ನಾಯಕರು ಭಾಗವಹಿಸಿದ್ದರು.

Join WhatsApp

Join Now

Join Telegram

Join Now