ಬೆಂಗಳೂರು: ಕಮಿಷನ್ ಕೇಳಿದ ಆರೋಪ ಹೊತ್ತಿದ್ದ ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರವಿಕುಮಾರ್ ಅವರ ರಾಜೀನಾಮೆ ವಿಚಾರವನ್ನು ಸಿಎಂ ಕಚೇರಿ ಸ್ಪಷ್ಟಪಡಿಸಿದೆ. ಇಂದು ಬೆಳಗ್ಗೆಯೇ ಸಿಎಂ ಕಚೇರಿಗೆ ಭೇಟಿ ನೀಡಿದ ರವಿಕುಮಾರ್ ಅವರು, ಸಿಎಂ ಬಳಿ ಇದರ ಹಿಂದಿನ ಸತ್ಯಾಂಶವನ್ನು ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ ತಮ್ಮ ಮೇಲಿನ ಆರೋಪವನ್ನು ರವಿಕುಮಾರ್ ಅವರು ತಳ್ಳಿ ಹಾಕಿದ್ದಾರೆ. ವಿಡಿಯೋದಲ್ಲಿ ಇರುವ ಆಡಿಯೋ ತಮ್ಮದಲ್ಲ. ಎಐ ತಂತ್ರಜ್ಞಾನ ಬಳಸಿ ತಿರುಚಲಾಗಿದೆ. ನಾನು ಯಾರಿಂದಲೂ ಹಣ ತೆಗೆದುಕೊಂಡಿಲ್ಲ, ಯಾರಿಗೂ ಕೊಟ್ಟಿಲ್ಲ. ವಿಡಿಯೋವನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸದರೆ ಸತ್ಯ ಬಯಲಿಗೆ ಬರುತ್ತದೆ ಎಂದಿದ್ದಾರೆ. ತಮ್ಮ ಮೇಲಿನ ಆರೋಪವನ್ನು ಈ ಮೂಲಕ ತಳ್ಳಿ ಹಾಕಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ಸೂಚನೆ ಮೇರೆಗೆ ರಾಜೀನಾಮೆಯನ್ನ ನೀಡಿದ್ದಾರೆ.

ಎಸ್ ರವಿಕುಮಾರ್ ವಿರುದ್ಧ ಭೂ ಒಡೆತನದ ಯೋಜನೆಯಡಿ 60% ಕಮಿಷನ್ ಕೇಳಿದ ಆರೋಪ ಇದೆ. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವು ಭೋವಿ ಸಮುದಾಯದ ಭೂ ರಹಿತ ಕಾರ್ಮಿಕ ಮಹಿಳೆಯರಿಗೆ ಭೂ ಒಡೆತನದ ಯೋಜನೆಯಡಿ ಅನುದಾನ ನೀಡುವುದಾಗಿದೆ. ಈ ಯೋಜನೆಯಡಿ 15 ಕೋಟಿ ರೂಪಾಯಿ ವೆಚ್ಚದಲ್ಲಿ60 ಕೋಟಿ ವೆಚ್ಚದಲ್ಲಿ 60 ಎಕರೆ ಭೂಮಿಯನ್ನು ಖರೀದಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಉದ್ದೇಶವಿತ್ತು. ಈ ಯೋಜನೆಯ ಫಲಾನುಭವಿಗಳಿಂದ ಶೇಕಡಾ 40 ರಿಂದ 60 ರಷ್ಟು ಕಮಿಷನ್ ವಸೂಲಿ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಈ ಸಂಬಂಧ ವಿಡಿಯೋ ಕೂಡ ವೈರಲ್ ಆಗಿದ್ದು, ತಮ್ಮ ಹುದ್ದೆಗೆ ರಾಜೀನಾಮೆಯನ್ನ ನೀಡಿದ್ದಾರೆ.





















