ಉತ್ತರಾಖಂಡದ ಚಂಪಾವತ್ ಜಿಲ್ಲೆಯಲ್ಲಿ ದುಃಖದ ಘಟನೆ ಸಂಭವಿಸಿದ್ದು, ವಿಶೇಷ ಕಾರ್ಯಾಚರಣೆ ತಂಡದ (SOG) ಅಧಿಕಾರಿಯೊಬ್ಬರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹಠಾತ್ ಅಸ್ವಸ್ಥಗೊಂಡು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ಪೊಲೀಸ್ ಇಲಾಖೆ ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಉಂಟುಮಾಡಿದೆ.ಮೃತ ಅಧಿಕಾರಿಯನ್ನು 38 ವರ್ಷದ ಗಿರೀಶ್ ಭಟ್ ಎಂದು ಗುರುತಿಸಲಾಗಿದೆ. ಅವರು ಚಂಪಾವತ್ ಎಸ್ಒಜಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದು, ಶುಕ್ರವಾರ ಎಂದಿನಂತೆ ಸ್ಥಳೀಯ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಈ ವೇಳೆ ಅವರಿಗೆ ಏಕಾಏಕಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ನೆಲಕ್ಕುರುಳಿದ್ದಾರೆ.
ತಕ್ಷಣವೇ ಜಿಮ್ನಲ್ಲಿದ್ದವರು ಅವರನ್ನು ಖಾತಿಮಾ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅವರು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಸಾವಿನ ನಿಖರ ಕಾರಣ ವೈದ್ಯಕೀಯ ವರದಿ ಬಳಿಕವೇ ಸ್ಪಷ್ಟವಾಗಲಿದೆ.ಮೂಲತಃ ಪಿಥೋರಗಢ ಜಿಲ್ಲೆಯವರಾದ ಗಿರೀಶ್ ಭಟ್, ಬಳಿಕ ಬನ್ಬಸಾದಲ್ಲಿ ನೆಲೆಸಿದ್ದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.ಚಂಪಾವತ್ ಎಸ್ಒಜಿ ಘಟಕದಲ್ಲಿ ದಕ್ಷ ಮತ್ತು ಕರ್ತವ್ಯನಿಷ್ಠ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಗಿರೀಶ್ ಭಟ್ ಹಲವು ಮಹತ್ವದ ಪೊಲೀಸ್ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಸಹೋದ್ಯೋಗಿಗಳು ಸ್ಮರಿಸಿದ್ದಾರೆ.

ಅವರ ಅಂತ್ಯಕ್ರಿಯೆಯನ್ನು ಬನ್ಬಸಾದ ಶಾರದಾ ಘಾಟ್ನಲ್ಲಿ ಪೊಲೀಸ್ ಹಾಗೂ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.
ಇತ್ತೀಚಿನ ದಿನಗಳಲ್ಲಿ ವ್ಯಾಯಾಮದ ವೇಳೆ ಅಥವಾ ನಂತರ ಸಂಭವಿಸುತ್ತಿರುವ ಹಠಾತ್ ಸಾವುಗಳ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿವೆ. ಕೆಲವು ದಿನಗಳ ಹಿಂದೆಯಷ್ಟೇ ಕರ್ನಾಟಕದ ದಾವಣಗೆರೆಯಲ್ಲಿ 26 ವರ್ಷದ ರಾಷ್ಟ್ರಮಟ್ಟದ ಬಾಡಿಬಿಲ್ಡರ್ ಸುಶೀಲ್ ಕುಮಾರ್ ಕೂಡ ಜಿಮ್ ಮುಗಿಸಿ ಮನೆಗೆ ಬಂದ ಬಳಿಕ ಕುಸಿದು ಬಿದ್ದು ಮೃತಪಟ್ಟಿದ್ದರು.ಈ ಎರಡು ಘಟನೆಗಳು ಯುವಕರಲ್ಲಿ ಮತ್ತು ತೀವ್ರ ದೈಹಿಕ ಕಸರತ್ತು ಮಾಡುವವರಲ್ಲಿ ಆರೋಗ್ಯ ತಪಾಸಣೆಯ ಅಗತ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿವೆ. ದೇಹದ ಸಾಮರ್ಥ್ಯ ಮೀರಿ ವ್ಯಾಯಾಮ ಮಾಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯೂ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













